ಬೆಳಗಾವಿ: ಸಿದ್ದಾಪುರದ ಮಹೇಶ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಜಾಮೀನು ಮಂಜೂರಾಗಿದ್ದು, ಗುರುವಾರ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ಜಾಮೀನು ಆದೇಶದ ನಂತರ ಕಾನೂನು ಪ್ರಕ್ರಿಯೆ ಪೂರ್ಣಗೊಂಡು ನಾಗನನ್ನು ಮೊದಲು ಬೆಳಗಾವಿ ಜಿಲ್ಲಾಸ್ಪತ್ರೆಯ ಕೈದಿ ವಾರ್ಡಿಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆರೋಗ್ಯ ಪರಿಶೀಲನೆ ನಂತರ ಜೈಲು ಅಧಿಕಾರಿಗಳು ಅಧಿಕೃತವಾಗಿ ಬಿಡುಗಡೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಮಹೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ನಾಗ ಕಳೆದ ಹಲವು ತಿಂಗಳುಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಸೆಷನ್ಸ್ ಕೋರ್ಟ್ ಇತ್ತೀಚೆಗೆ ಅವರಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಬಿಡುಗಡೆ ಸಾಧ್ಯವಾಯಿತು. ಆದರೆ ತಾಂತ್ರಿಕ ಕಾರಣಗಳಿಂದ ಒಂದು ದಿನ ವಿಳಂಬವಾಗಿದ್ದು, ಬಿಡುಗಡೆ ಪ್ರಕ್ರಿಯೆ ಗುರುವಾರ ಅಂತಿಮಗೊಂಡಿದೆ.
ಜೈಲು ಹೊರಗೆ ವಿಲ್ಸನ್ ಗಾರ್ಡನ್ ನಾಗನನ್ನು ಸ್ವಾಗತಿಸಲು ಸುಮಾರು ಹತ್ತಕ್ಕೂ ಹೆಚ್ಚು ಸಹಚರರು ಆಗಮಿಸಿದ್ದರು. ಆದರೆ ಜೈಲು ಸುತ್ತಮುತ್ತ ಗುಂಪು ಸೇರುವ ಸಾಧ್ಯತೆ ಹಿನ್ನೆಲೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು.
ಮಹೇಶ್ ಕೊಲೆ ಪ್ರಕರಣವು ರಾಜ್ಯದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. 2023ರಲ್ಲಿ ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಮಹೇಶ್ ಹತ್ಯೆ ನಡೆದಿತ್ತು. ಪೊಲೀಸ್ ತನಿಖೆ ಪ್ರಕಾರ, ಹಳೆಯ ದ್ವೇಷ ಮತ್ತು ಗ್ಯಾಂಗ್ ವೈಷಮ್ಯವೇ ಕೊಲೆಗೆ ಪ್ರಮುಖ ಕಾರಣವಾಗಿತ್ತು. ಮಹೇಶ್ ಮತ್ತು ನಾಗನ ನಡುವೆ ಬಹಳ ದಿನಗಳಿಂದ ವೈಮನಸ್ಸು ಇದ್ದು, ಪರಸ್ಪರ ಗ್ಯಾಂಗ್‌ಗಳು ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದವು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.
ವಿಲ್ಸನ್ ಗಾರ್ಡನ್ ನಾಗನ ಹೆಸರು ಇತ್ತೀಚೆಗೆ ಮತ್ತೊಂದು ವಿವಾದಕ್ಕೂ ಸಿಲುಕಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರೊಂದಿಗೆ ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇದುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಈ ಘಟನೆ ಜೈಲು ಶಿಸ್ತಿನ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ನಂತರ ಅವರನ್ನು ಬೆಂಗಳೂರಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ಆರೋಗ್ಯ ಸಮಸ್ಯೆಗಳ ಕಾರಣದಿಂದ ಕಳೆದ ಒಂದು ವಾರದಿಂದ ನಾಗನನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವೈದ್ಯಕೀಯ ತಪಾಸಣೆ ಮತ್ತು ಜಾಮೀನು ಆದೇಶದ ಹಿನ್ನೆಲೆ ಇದೀಗ ಬಿಡುಗಡೆ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





