ಬೆಂಗಳೂರು, ಮೇ 19: ಇಸ್ರೇಲ್-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಕೊರತೆ ಉಂಟಾಗಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡುತ್ತಿವೆ. ಈ ಹಿನ್ನೆಲೆ ರಾಜ್ಯದ ಹಲವೆಡೆ ಜನರು ಆತಂಕಗೊಂಡು ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದು ಹೆಚ್ಚುವರಿ ಇಂಧನ ಖರೀದಿಸುತ್ತಿರುವ ಘಟನೆಗಳು ವರದಿಯಾಗಿವೆ. ಆದರೆ ಈ ಎಲ್ಲ ವದಂತಿಗಳಿಗೆ ಇದೀಗ ತೈಲ ಕಂಪನಿಗಳು ಸ್ಪಷ್ಟನೆ ನೀಡಿದ್ದು, ಕರ್ನಾಟಕದಲ್ಲಿ ಯಾವುದೇ ಇಂಧನ ಕೊರತೆ ಇಲ್ಲ ಎಂದು ತಿಳಿಸಿವೆ.
ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ ಸಿದ್ಧಾರ್ಥ್ ಅಗರ್ವಾಲ್ ಅವರು ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳು ರಾಜ್ಯದಾದ್ಯಂತ ಪೆಟ್ರೋಲ್ (MS), ಡೀಸೆಲ್ (HSD) ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಪೂರೈಕೆಯನ್ನು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಸುತ್ತಿವೆ ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಇರುವ ಟರ್ಮಿನಲ್‌ಗಳು, ಡಿಪೋಗಳು, ಎಲ್‌ಪಿಜಿ ಬಾಟ್ಲಿಂಗ್ ಪ್ಲಾಂಟ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಇಂಧನ ವಿತರಣಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಲಭ್ಯವಿದ್ದು, ಸುರಕ್ಷತಾ ಹಾಗೂ ಕಾರ್ಯಾಚರಣಾ ನಿಯಮಾವಳಿಗಳ ಅನುಸಾರ ಸರಬರಾಜು ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ ಪೂರೈಕೆ ಸರಪಳಿಯ ವಿವಿಧ ಹಂತಗಳಲ್ಲಿ ಸಾಕಷ್ಟು ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಲಭ್ಯವಿದೆ. ಗ್ರಾಹಕರ ನೈಜ ಬೇಡಿಕೆಯನ್ನು ಪೂರೈಸಲು ನಿರಂತರವಾಗಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಮನೆ ಬಳಕೆಯ LPG ಗ್ಯಾಸ್ ಪೂರೈಕೆಯೂ ರಾಜ್ಯಾದ್ಯಂತ ಸಾಮಾನ್ಯ ಸ್ಥಿತಿಯಲ್ಲಿದ್ದು, ಯಾವುದೇ ತೊಂದರೆ ಇಲ್ಲದೆ ವಿತರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಜನರಿಗೆ ನಿರಂತರ ಇಂಧನ ಲಭ್ಯವಾಗುವಂತೆ ಮಾಡಲು ತೈಲ ಕಂಪನಿಗಳು ಲಾಜಿಸ್ಟಿಕ್ಸ್, ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆಗಳಲ್ಲಿ ಪರಸ್ಪರ ಸಮನ್ವಯ ಸಾಧಿಸುತ್ತಿವೆ. ಒಟ್ಟಾರೆ ರಾಜ್ಯದ ಇಂಧನ ಪೂರೈಕೆ ಪರಿಸ್ಥಿತಿ ಸಂಪೂರ್ಣ ಸ್ಥಿರವಾಗಿದ್ದು, ಸರ್ಕಾರ ಮತ್ತು ತೈಲ ಕಂಪನಿಗಳು ನಿರಂತರ ನಿಗಾ ವಹಿಸಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಜನರು ಗಾಬರಿಗೊಳ್ಳಬಾರದು ಎಂದು ತೈಲ ಕಂಪನಿಗಳು ಮನವಿ ಮಾಡಿವೆ. ಅಗತ್ಯವಿದ್ದಾಗ ಮಾತ್ರ ಇಂಧನ ಖರೀದಿಸಬೇಕು, ಅನಗತ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಪ್ರವೃತ್ತಿಯನ್ನು ತಪ್ಪಿಸಬೇಕು ಎಂದು ಸೂಚಿಸಲಾಗಿದೆ. ಪ್ಯಾನಿಕ್ ಬೈಯಿಂಗ್‌ನಿಂದ ಅನಗತ್ಯ ಒತ್ತಡ ಉಂಟಾಗಿ ಸಾಮಾನ್ಯ ಗ್ರಾಹಕರಿಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ನಾಗರಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.





