ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸಿದ ಮಾರ್ಗದ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದೆ. ಈ ಘಟನೆ ತೀವ್ರ ಆತಂಕ ಮೂಡಿಸಿದೆ. ಪ್ರಧಾನಿಯವರ ಭದ್ರತೆಯಲ್ಲಿ ಇದೊಂದು ದೊಡ್ಡ ಲೋಪವಾಗಿದ್ದು, ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ಆರ್ಟ್ ಆಫ್ ಲಿವಿಂಗ್ ನ 47ನೇ ವಾರ್ಷಿಕ ಕಾರ್ಯಕ್ರಮ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರ 70ನೇ ಜನ್ಮದಿನಾಚರಣೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಅವರು ಹೈದರಾಬಾದ್‌ಗೆ ತೆರಳುತ್ತಿದ್ದ ವೇಳೆ ಕನಕಪುರ ರಸ್ತೆಯ ಕಗ್ಗಲಿಪುರ ತಾತಗುಣಿ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ.
ಪ್ರಧಾನಿಯವರ ವಾಹನ ಸಂಚರಿಸಿದ ನಿಖರ ಮಾರ್ಗದ ಪಕ್ಕದಲ್ಲೇ ಈ ಸ್ಫೋಟಕ ವಸ್ತುಗಳು ದೊರಕಿರುವುದು ಭದ್ರತಾ ಪಡೆಗಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ.
ಪ್ರಧಾನಿಯ ಪ್ರಯಾಣ ವಿಳಂಬ
ಜಿಲೆಟಿನ್ ಕಡ್ಡಿಗಳು ಪತ್ತೆಯಾದ ತಕ್ಷಣ ಪ್ರಧಾನಿಯವರ ಹೈದರಾಬಾದ್ ಪ್ರಯಾಣವನ್ನು ಸ್ವಲ್ಪ ಕಾಲ ವಿಳಂಬಗೊಳಿಸಲಾಯಿತು. ಸ್ಥಳ ಪರಿಶೀಲನೆ ಮತ್ತು ಬಾಂಬ್ ಸ್ಕ್ವಾಡ್ ತಂಡಗಳು ಪ್ರದೇಶವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ ನಂತರವೇ ಪ್ರಯಾಣಕ್ಕೆ ಹಸಿರು ನಿಶಾನೆ ನೀಡಲಾಯಿತು.
ಆರೋಪಿ ವಶಕ್ಕೆ- ತೀವ್ರ ವಿಚಾರಣೆ
ರಾಮನಗರ ಮತ್ತು ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈತನನ್ನು ಅಜ್ಞಾತ ಸ್ಥಳದಲ್ಲಿ ಪ್ರಶ್ನಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ವಶಕ್ಕೆ ಪಡೆದ ವ್ಯಕ್ತಿ ಕೋರಮಂಗಲ ಸಮೀಪದ ಮನೆಯಲ್ಲಿದ್ದಾನೆ ಎನ್ನಲಾಗಿದೆ. ಅವನಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ವಿಶೇಷ ವಿಚಾರಣಾ ತಂಡವನ್ನೇ ರಚಿಸಿದ್ದಾರೆ.
ಪ್ರಧಾನಿ ಮೋದಿ ಅವರ ಮಾರ್ಗದಲ್ಲಿ ನಿಖರವಾಗಿ ಯಾವ ಉದ್ದೇಶಕ್ಕಾಗಿ ಈ ಜಿಲೆಟಿನ್ ಕಡ್ಡಿಗಳನ್ನು ಇರಿಸಲಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಭಯೋತ್ಪಾದನಾ ಚಟುವಟಿಕೆಗೆ ಸಂಬಂಧವಿದೆಯೇ, ಪ್ರಧಾನಿಯವರ ಕೊಲೆ ಯತ್ನವೇ ಅಥವಾ ಬೇರೆ ಯಾವುದೋ ಕಾರಣವೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.




