ಚಿತ್ರದುರ್ಗ: ರಾಜ್ಯ ರಾಜಕಾರಣದ ಹಿರಿಯ ನಾಯಕ, ರೈತಪರ ಹೋರಾಟಗಾರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ಸುವರ್ಣ ಸಂಭ್ರಮಕ್ಕೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ. ‘ಬಿಎಸ್‌ವೈ ಅಭಿಮಾನೋತ್ಸವ’ ಹಿನ್ನೆಲೆ ಇಡೀ ನಗರ ಕೇಸರಿಮಯ ವಾತಾವರಣ ಪಡೆದುಕೊಂಡಿದ್ದು, ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಹಬ್ಬದ ಸಂಭ್ರಮದಲ್ಲಿ ಮುಳುಗಿದರು.
ಅಭಿಮಾನೋತ್ಸವಕ್ಕಾಗಿ ನಗರದ ಹೊರವಲಯದಲ್ಲಿ ಜರ್ಮನ್ ಮಾದರಿಯ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ. ಏಳು ಸುತ್ತಿನ ಕೋಟೆ ಮಾದರಿಯ ಭವ್ಯ ಪ್ರವೇಶ ದ್ವಾರ ಎಲ್ಲರ ಗಮನ ಸೆಳೆದಿತ್ತು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಅಭಿಮಾನಿಗಳಿಗೆ ಯಾವುದೇ ತೊಂದರೆ ಆಗದಂತೆ ಕುಡಿಯುವ ನೀರು, ವಾಹನ ನಿಲುಗಡೆ, ಭದ್ರತೆ ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಬಿಎಸ್‌ವೈ ಚಿತ್ರದುರ್ಗ ಪ್ರವೇಶಿಸಿದ ಕ್ಷಣದಿಂದಲೇ ನಗರದಲ್ಲಿ ಉತ್ಸಾಹದ ವಾತಾವರಣ ನಿರ್ಮಾಣವಾಯಿತು. ಕನಕ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಯಡಿಯೂರಪ್ಪ ತೆರೆದ ವಾಹನದಲ್ಲಿ ಸಾಗಿದರು. ಮಾರ್ಗಮಧ್ಯೆ ಅಭಿಮಾನಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು. ಮಹಿಳೆಯರು ಪೂರ್ಣಕುಂಭ ಹಿಡಿದು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.
‘ರೈತನಾಯಕ ಯಡಿಯೂರಪ್ಪರಿಗೆ ಜಯವಾಗಲಿ’, ‘ಭಾರತ್ ಮಾತಾ ಕಿ ಜೈ’, ‘ವಿಜಯಣ್ಣನಿಗೆ ಜಯವಾಗಲಿ’ ಎಂಬ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು. ನಾರಿ ಶಕ್ತಿ ವಂದನ್ ಅಭಿಯಾನದಡಿ ಮಹಿಳೆಯರು ಒನಕೆ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಜೊತೆಗೆ ರೈತ ಮೋರ್ಚಾ ಪದಾಧಿಕಾರಿಗಳು ನೇಗಿಲಿನ ಪ್ರತಿಕೃತಿ ಹಿಡಿದು ತಮ್ಮ ನಾಯಕನಿಗೆ ಗೌರವ ಸಲ್ಲಿಸಿದರು.
ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿ 25ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗವಹಿಸಿದ್ದವು. ವಿವಿಧ ಕಲಾರೂಪಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು. ಬಿಎಸ್‌ವೈ ಅವರ ರಾಜಕೀಯ ಜೀವನದ ಹೋರಾಟ ಮತ್ತು ಸಾಧನೆಗಳನ್ನು ಚಿತ್ರಿಸುವ AI ತಂತ್ರಜ್ಞಾನ ಆಧಾರಿತ ಆರು ಸ್ತಬ್ಧ ಚಿತ್ರಗಳು ಜನರಲ್ಲಿ ವಿಶೇಷ ಕುತೂಹಲ ಮೂಡಿಸಿವೆ.
ಇನ್ನೊಂದು ವಿಶೇಷ ಆಕರ್ಷಣೆ ಎಂದರೆ ಯಡಿಯೂರಪ್ಪನವರ ಅದೃಷ್ಟದ ಅಂಬಾಸಿಡರ್ ಕಾರು. 1974ರಲ್ಲಿ ಖರೀದಿಸಿದ ಈ ಕಾರು ಬಿಎಸ್‌ವೈ ಅವರ ರಾಜಕೀಯ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ‘4545’ ಸಂಖ್ಯೆಯಿರುವ ಈ ವಾಹನವನ್ನು ಅವರು ಅದೃಷ್ಟದ ಸಂಕೇತವೆಂದು ಪರಿಗಣಿಸುತ್ತಾರೆ. 1980 ಮತ್ತು 90ರ ದಶಕಗಳಲ್ಲಿ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಸಂಚರಿಸಲು ಇದೇ ಕಾರನ್ನು ಬಳಸಲಾಗುತ್ತಿತ್ತು.
ಮೆರವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಬಿ.ಸಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದರು. ಸಂಸದ ಬಿ.ವೈ. ರಾಘವೇಂದ್ರ, ಸಿ.ಟಿ. ರವಿ, ಎನ್. ರವಿಕುಮಾರ್, ಜಿ. ಜನಾರ್ಧನ ರೆಡ್ಡಿ, ಮುನಿರತ್ನ ಸೇರಿದಂತೆ ಹಲವು ಶಾಸಕರು, ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶನಿವಾರ ನಡೆಯಲಿರುವ ಬೃಹತ್ ಅಭಿಮಾನೋತ್ಸವ ಸಮಾರಂಭಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.





