ಮಥುರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿರುವ ಒಂದು ವಿಚಿತ್ರ ಮತ್ತು ಆತಂಕಕಾರಿ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಹಾವು ಕಚ್ಚಿದ ವ್ಯಕ್ತಿಯೊಬ್ಬ, ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವಾಗ ತನ್ನನ್ನು ಕಚ್ಚಿದ ಹಾವನ್ನೇ ಜೇಬಿನಲ್ಲಿ ಇಟ್ಟುಕೊಂಡು ಬಂದ ಘಟನೆ ನಡೆದಿದೆ..
ಈ ಘಟನೆಯಲ್ಲಿ ರಿಕ್ಷಾ ಚಾಲಕ ದೀಪಕ್ ಎಂಬವರು ಹಾವು ಕಚ್ಚಿದ ನಂತರ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಅವರು ಕೇವಲ ಚಿಕಿತ್ಸೆಗಾಗಿ ಮಾತ್ರವಲ್ಲದೆ, ತಮಗೆ ಕಚ್ಚಿದ ಜೀವಂತ ಹಾವನ್ನೇ ಜೇಬಿನಲ್ಲಿ ಇಟ್ಟುಕೊಂಡು ಆಸ್ಪತ್ರೆಗೆ ಬಂದಿದ್ದರು. ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿ, ಇತರ ರೋಗಿಗಳು ಹಾಗೂ ಸಂಬಂಧಿಕರು ಕ್ಷಣಾರ್ಧದಲ್ಲಿ ಬೆಚ್ಚಿಬಿದ್ದಿದ್ದಾರೆ.
ದೀಪಕ್ ಆಸ್ಪತ್ರೆ ಪ್ರವೇಶಿಸಿದ ತಕ್ಷಣ ವೈದ್ಯರಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಅವರು ತಮ್ಮ ಬಳಿ ಜೀವಂತ ಹಾವನ್ನು ತಂದಿರುವ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಸಾರ್ವಜನಿಕ ಆಸ್ಪತ್ರೆಯೊಳಗೆ ಹಾವಿರುವುದು ಇತರ ರೋಗಿಗಳ ಜೀವಕ್ಕೆ ಅಪಾಯಕಾರಿಯೆಂದು ತಿಳಿದ ವೈದ್ಯರು, ಮೊದಲು ಹಾವನ್ನು ಆಸ್ಪತ್ರೆ ಆವರಣದ ಹೊರಗೆ ಬಿಡುವಂತೆ ದೀಪಕ್‌ಗೆ ಮನವಿ ಮಾಡಿದರು.
ಆದರೆ ದೀಪಕ್, “ನನ್ನ ಜೀವ ಉಳಿಸುವುದು ಮುಖ್ಯ. ಹಾವನ್ನು ತೋರಿಸದೇ ಇದ್ದರೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ” ಎಂದು ವಾದಿಸಿದ್ದಾರೆ.
ಚಿಕಿತ್ಸೆ ನಿರಾಕರಿಸುತ್ತಿದ್ದಾರೆ ಎಂಬ ಆರೋಪ ಮಾಡಿ ದೀಪಕ್ ಆಸ್ಪತ್ರೆ ಎದುರು ತಮ್ಮ ರಿಕ್ಷಾವನ್ನು ನಿಲ್ಲಿಸಿ ಇತರ ವಾಹನಗಳ ಸಂಚಾರವನ್ನು ತಡೆಯಲು ಯತ್ನಿಸಿದ್ದಾರೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ಗದ್ದಲ ಉಂಟಾಗಿದ್ದು, ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು. ಸಾರ್ವಜನಿಕ ಆಸ್ಪತ್ರೆಯೊಳಗೆ ಜೀವಂತ ಹಾವನ್ನು ತರಲು ಅವಕಾಶವಿಲ್ಲ, ಇದರಿಂದ ಇತರ ರೋಗಿಗಳು ಹಾಗೂ ಸಿಬ್ಬಂದಿಗೆ ಅಪಾಯ ಉಂಟಾಗಬಹುದು ಎಂಬುದನ್ನು ಪೊಲೀಸರು ಮತ್ತು ವೈದ್ಯರು ದೀಪಕ್‌ಗೆ ವಿವರವಾಗಿ ತಿಳಿಸಿದರು. ನಿರಂತರ ಮನವೊಲಿಕೆ ಮತ್ತು ಸಲಹೆಯ ನಂತರ ಕೊನೆಗೂ ದೀಪಕ್ ಹಾವನ್ನು ಆಸ್ಪತ್ರೆ ಆವರಣದಿಂದ ದೂರ ಸುರಕ್ಷಿತವಾಗಿ ಬಿಡಲು ಒಪ್ಪಿಕೊಂಡರು.
ಹಾವನ್ನು ಬಿಡಿಸಿದ ಬಳಿಕ ವೈದ್ಯರು ತಕ್ಷಣವೇ ದೀಪಕ್‌ಗೆ ಅಗತ್ಯ ಚಿಕಿತ್ಸೆ ಆರಂಭಿಸಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ದೀಪಕ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಬಳಿಕ ದೀಪಕ್ ತಮ್ಮ ವಿಚಿತ್ರ ನಡೆಗೆ ಕಾರಣವನ್ನೂ ವಿವರಿಸಿದ್ದಾರೆ. “ನನ್ನನ್ನು ಕಚ್ಚಿದ ಹಾವು ಯಾವ ಜಾತಿಯದು, ಅದು ವಿಷಕಾರಿ ಹಾವೇ ಅಥವಾ ಅಲ್ಲವೇ ಎಂಬುದು ವೈದ್ಯರಿಗೆ ತಿಳಿದರೆ ಸರಿಯಾದ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದುಕೊಂಡು ಹಾವನ್ನೇ ಆಸ್ಪತ್ರೆಗೆ ತಂದೆ. ನನ್ನ ಉದ್ದೇಶ ತಪ್ಪಲ್ಲ” ಎಂದು ಅವರು ಹೇಳಿದ್ದಾರೆ.





