ಹ್ಯಾಂಗ್ಝೌ, ಚೀನಾ: ವಯಸ್ಸಾದಂತೆ ಉಂಟಾಗುವ ಬೆನ್ನು ನೋವಿನ ತೊಂದರೆಯಿಂದ ಮುಕ್ತಿ ಪಡೆಯಲು ಒಬ್ಬ ಮಹಿಳೆ ಮಾಡಿದ ‘ವಿಚಿತ್ರ’ ಪ್ರಯತ್ನ ಅವಳಿಗೇ ಆಸ್ಪತ್ರೆಗೆ ದಾರಿ ಮಾಡಿಕೊಟ್ಟಿತು. 82 ವರ್ಷದ ಜಾಂಗ್ ಎಂಬ ಮಹಿಳೆ ಬೆನ್ನು ನೋವನ್ನು ಗುಣಪಡಿಸಿಕೊಳ್ಳಲು ಒಟ್ಟು ಎಂಟು ಜೀವಂತ ಕಪ್ಪೆಗಳನ್ನು ನುಂಗಿರುವ ಘಟನೆ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಹ್ಯಾಂಗ್ಝೌನಲ್ಲಿ ನಡೆದಿದೆ.
ಸೆಪ್ಟೆಂಬರ್ ಆರಂಭದಲ್ಲಿ ತೀವ್ರ ಹೊಟ್ಟೆನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದ ಜಾಂಗ್ ಅವರನ್ನು ಹ್ಯಾಂಗ್ಝೌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ರೋಗಿಯ ಮಗನಿಂದ ವಿಚಾರಿಸಿದಾಗ, ಅವರ ತಾಯಿ ತೀವ್ರ ಬೆನ್ನು ನೋವಿದ್ದರಿಂದ, ನೋವು ಕಡಿಮೆಯಾಗುತ್ತದೆ ಎಂದು ಜೀವಂತ ಕಪ್ಪೆಗಳನ್ನು ನುಂಗಿದ್ದರು,ಇದನ್ನು ಕೇಳಿದ ವೈದ್ಯರು ಬೆಚ್ಚಿ ಬಿದ್ದದ್ದಾರೆ.
ಹರ್ನಿಯೇಟೆಡ್ ಡಿಸ್ಕ್ ಸಮಸ್ಯೆಯಿಂದ ದೀರ್ಘಕಾಲದಿಂದ ಬಳಲುತ್ತಿದ್ದ ಜಾಂಗ್ ಅವರಿಗೆ, ಜೀವಂತ ಕಪ್ಪೆಗಳನ್ನು ತಿನ್ನುವುದರಿಂದ ಈ ನೋವು ಕಡಿಮೆಯಾಗುತ್ತದೆ ಎಂದು ಯಾರೋ ಸಲಹೆ ನೀಡಿದ್ದರು. ಈ ನಂಬಿಕೆಯಿಂದಾಗಿ, ಅವರು ತಮ್ಮ ಮಗನಿಗೆ ಕಾರಣ ವಿವರಿಸದೆ ಕಪ್ಪೆಗಳನ್ನು ತಂದುಕೊಡುವಂತೆ ಕೇಳಿಕೊಂಡಿದ್ದರು. ನಂತರ ಅವರ ಮಾತಿನಂತೆ ಕಪ್ಪೆಗಳನ್ನು ಹಿಡಿದು ತಂದುಕೊಟ್ಟರು. ಜಾಂಗ್ ಮೊದಲ ದಿನ ಮೂರು ಮತ್ತು ಮರುದಿನ ಐದು – ಒಟ್ಟು ಎಂಟು ಜೀವಂತ ಕಪ್ಪೆಗಳನ್ನು ನುಂಗಿದ್ದಾರೆ.
ಆರಂಭದಲ್ಲಿ ಜಾಂಗ್ ಅಸ್ವಸ್ಥತೆ ಅನುಭವಿಸಿದರೂ, ನೋವು ಕಡಿಮೆಯಾಗುವ ಭ್ರಮೆಯಲ್ಲಿ ಇದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಸ್ಥಿತಿ ಗಂಭೀರವಾಗಿ ಹದಗೆಡಲು ಪ್ರಾರಂಭಿಸಿತು. ನೋವು ಸಹಿಸಲಾಗದ ಮಟ್ಟಿಗೆ ಹೆಚ್ಚಾಗಿ, ಅವರು ತಮ್ಮ ಕುಟುಂಬದವರ ಮುಂದೆ, ನನಗೆ ಇನ್ನು ತಡಿಯೋಕಾಗಲ್ಲ, ಆಸ್ಪತ್ರೆಗೆ ಹೋಗೋಣ ಎಂದು ಹೇಳಿದ್ದಾರೆ. ಕೂಡಲೇ ಅವರ ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದರು..
ಆಸ್ಪತ್ರೆಯ ವೈದ್ಯರು ಮೊದಲು ಹೊಟ್ಟೆಯಲ್ಲಿ ಗಡ್ಡೆ ಇದೆಯೇ ಎಂದು ಪರೀಕ್ಷಿಸಿದರು. ನಂತರದ ಪರೀಕ್ಷೆಯಲ್ಲಿ, ನುಂಗಿದ ಕಪ್ಪೆಗಳಿಂದಾಗಿಯೇ ರೋಗಿಯ ಜೀರ್ಣಾಂಗ ವ್ಯವಸ್ಥೆಗೆ ಗಂಭೀರ ಹಾನಿಯಾಗಿದೆ ಎಂಬುದು ತಿಳಿದುಬಂತು. ರೋಗಿಯನ್ನು ಎರಡು ವಾರಗಳ ಕಾಲ ತೀವ್ರ ಚಿಕಿತ್ಸೆಗೆ ಗುರಿಪಡಿಸಲಾಯಿತು. ಚಿಕಿತ್ಸೆಯ ನಂತರ ಜಾಂಗ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಈ ಪ್ರಕರಣವನ್ನು ಭೇದಿಸಿದ ಹಿರಿಯ ವೈದ್ಯ ಡಾ. ವು ಝಾಂಗ್ವೆನ್ ಅವರು ಹೇಳುವಂತೆ, ಈ ರೀತಿಯ ಘಟನೆಗಳು ಅಸಾಮಾನ್ಯವಲ್ಲ. ಅವರು ವಿವರಿಸಿದಂತೆ, ನಂಬಿಕೆ ಮತ್ತು ಅಜ್ಞಾನದಿಂದಾಗಿ ಜನರು ಹಸಿ ಹಾವುಗಳು ಮತ್ತು ಕಪ್ಪೆಗಳಂತಹ ಜೀವಂತ ಪ್ರಾಣಿಗಳನ್ನು ನುಂಗಿದ ಉದಾಹರಣೆಗಳು ಸಾಕಷ್ಟು ಇವೆ. ಇಂತಹ ಪ್ರಾಚೀನ ಚಿಕಿತ್ಸೆಗಳು ವಿಜ್ಞಾನದಿಂದ ಸಮರ್ಥಿಸಲ್ಪಡುವುದಿಲ್ಲ ಮತ್ತು ಆರೋಗ್ಯಕ್ಕೆ ಗಂಭೀರ ಅಪಾಯಕಾರಿ ಈ ಘಟನೆ ಸಾಂಪ್ರದಾಯಿಕ ನಂಬಿಕೆಗಳು ಮತ್ತು ವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆಯ ನಡುವಿನ ಅಂತರವನ್ನು ವ್ಯಕ್ತಪಡಿಸುತ್ತದೆ. ಆರೋಗ್ಯ ಸಮಸ್ಯೆಗಳಿಗೆ ಯಾವುದೇ ಪರಂಪರಾಗತ ಚಿಕಿತ್ಸೆಯನ್ನು ಮಾಡುವ ಮೊದಲು ನಿಪುಣ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಎಂದು ಎಚ್ಚರಿಕೆ ನೀಡಿದ್ದಾರೆ.