ಚಂದ್ರ.. ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದಿರ ನಿರ್ಜೀವ ಜಗತ್ತು ಅನ್ನೋ ಭಾವನೆ ವಿಜ್ಞಾನಿಗಳಲ್ಲಿತ್ತು. ಆದರೆ ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಇದಕ್ಕೆ ವಿರುದ್ಧವಾದ ಚಿತ್ರಣವನ್ನು ಮುಂದಿಡುತ್ತವೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರ, ಭೂವೈಜ್ಞಾನಿಕವಾಗಿ ಸಂಪೂರ್ಣವಾಗಿ ಸಜೀವವಾಗಿ ಇರಬಹುದು ಎನ್ನುತ್ತಿವೆ ಸಾಕ್ಷ್ಯಗಳು..! ಚಂದ್ರನ ಮೇಲ್ಮೈ ಸತತವಾಗಿ ಸಂಕುಚನಗೊಳ್ಳುತ್ತಿದೆ, ಬಿರುಕು ಬಿಡುತ್ತಿದೆ.. ಇದರಿಂದಾಗಿ ಚಂದ್ರನ ಮೇಲ್ಮೈನಲ್ಲಿ ಹೊಸ ಹೊಸ ಕುಳಿಗಳು, ಸುಕ್ಕುಗಳು ನಿರ್ಮಾಣವಾಗ್ತಿವೆ..
ಚಂದ್ರನ ಮೇಲ್ಮೈ ಬದಲಾವಣೆಗೆ ಕಾರಣಗಳೇನು?
ಚಂದ್ರ ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತ್ತು. ಚಂದ್ರ ಸೃಷ್ಟಿಯಾದ ಕ್ಷಣದಿಂದ ಹಿಡಿದು ಇಲ್ಲಿಯವರೆಗೂ ಅದರ ತಾಪಮಾನ ನಿರಂತರವಾಗಿ ಕಡಿಮೆ ಆಗುತ್ತಲೇ ಇದೆ. ಚಂದ್ರನ ಆಂತರಿಕ ಭಾಗವಾದ ಗರ್ಭವು ಸಾವಿರಾರು ಡಿಗ್ರಿ ಸೆಲ್ಷಿಯಸ್ ಬಿಸಿಯಾಗಿದೆ. ಆದರೆ, ಹೊರಗಿನ ಭಾಗ ಮಾತ್ರ ಬಾಹ್ಯಾಕಾಶದ ಶೀತಲ ವಾತಾವರಣದಿಂದಾಗಿ ನಿಧಾನವಾಗಿ ಶಾಖವನ್ನು ಕಳೆದುಕೊಳ್ಳುತ್ತಿದೆ. ಸಾಮಾನ್ಯವಾಗಿ ಯಾವುದೇ ಒಂದು ವಸ್ತು ತಣ್ಣಗಾಗುವಾಗ, ಅದು ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಇದೇ ನಿಯಮ ಚಂದ್ರನಿಗೂ ಅನ್ವಯ..
ಚಂದ್ರನ ಒಳಭಾಗ ತಣ್ಣಗಾಗಿ ಸಂಕುಚಿತಗೊಳ್ಳುತ್ತಿರುವ ಕಾರಣ ಅದರ ಹೊರ ಪದರಕ್ಕೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಹೀಗಾಗಿ, ಚಂದ್ರನ ಬಾಹ್ಯ ಪದರದಲ್ಲಿ ಬಿರುಕುಗಳು ಕಾಣಿಸಿಕೊಳ್ತಿವೆ. ಇದರ ಪರಿಣಾಮವಾಗಿ, ಒಂದು ಭಾಗದ ಶಿಲಾಪದರವು ಮತ್ತೊಂದರ ಮೇಲೆ ಏಳುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಮೇಲ್ನೋಟಕ್ಕೆ ಚಂದ್ರನ ಮೇಲೆ ಹೊಸ ಹೊಸ ಏರು ತಗ್ಗುಗಳು, ಕಂದಕಗಳು ನಿರ್ಮಾಣವಾಗ್ತಿವೆ.
ಪರ್ವತಗಳಂತಾಗಿವೆ ಚಂದಿರನ ಕಲೆಗಳು..!
ಭೂಮಿಯಿಂದ ನಾವು ನೋಡುವಾಗ ಕಪ್ಪು ಕಲೆಯ ರೀತಿ ಕಾಣುವ ಸುಕ್ಕುಗಳು ನಿಜಕ್ಕೂ ಕಪ್ಪಾದ ಕಲೆಗಳಲ್ಲ.. ಅವುಗಳನ್ನ ಲೋಬೇಟ್ ಸ್ಕಾರ್ಪ್ ಅಂತಾ ಕರೆಯಲಾಗುತ್ತದೆ. ಇವು ನೂರಾರು ಕಿಲೋಮೀಟರ್ ಉದ್ದ ಮತ್ತು ನೂರಾರು ಮೀಟರ್ ಎತ್ತರಕ್ಕೆ ಪರ್ವತಗಳ ರೀತಿ ರೂಪುಗೊಂಡಿವೆ. ದಶಲಕ್ಷ ವರ್ಷಗಳ ಹಿಂದೆಯೇ ಚಂದ್ರನ ಮೇಲೆ ರೂಪುಗೊಂಡಿರುವ ಈ ಪರ್ವತ ಶ್ರೇಣಿಗಳು, ಚಂದ್ರ ಇಂದಿಗೂ ಸಕ್ರಿಯವಾಗಿದ್ದಾನೆ ಅನ್ನೋದಕ್ಕೆ ಸ್ಪಷ್ಟ ಪುರಾವೆ ನೀಡುತ್ತಿವೆ. ಚಂದ್ರನ ಸುತ್ತಲೂ ಸುತ್ತುತ್ತಿರುವ ನಾಸಾ ಸಂಸ್ಥೆಯ ಲೂನಾರ್ ರಿಕಾನೈಸೆನ್ಸ್ ಆರ್ಬಿಟರ್ (ಎಲ್‌ಆರ್‌ಒ) ಉಪಗ್ರಹವು ಇದಕ್ಕೆ ಸ್ಪಷ್ಟ ಸಾಕ್ಷ್ಯಗಳನ್ನ ಕಲೆ ಹಾಕಿದೆ. ಹೈ-ರೆಸಲ್ಯೂಶನ್ ಚಿತ್ರಗಳನ್ನು ತೆಗೆದಿರುವ ಈ ಉಪಗ್ರಹಗಳು, ಚಂದ್ರ ಇಂದಿಗೂ ಜೀವಂತವಾಗಿದ್ದಾನೆ ಅನ್ನೋದನ್ನ ಸಾರಿ ಹೇಳುತ್ತಿವೆ.
ಚಂದ್ರ ಬದುಕಿರೋದಕ್ಕೆ ಸಾಕ್ಷ್ಯ ಕೊಡ್ತಿವೆ ಭೂಕಂಪಗಳು..!
ಚಂದ್ರ ಸಜೀವವಾಗಿದ್ದಾನೆ ಅನ್ನೋದಕ್ಕೆ ಅತ್ಯಂತ ಪ್ರಬಲ ಪುರಾವೆಯೆಂದರೆ ‘ಚಂದ್ರನ ಮೇಲ್ಮೈನಲ್ಲಿ ಸಂಭವಿಸುವ ಕಂಪನಗಳು..! 1969 ರಿಂದ 1977ರವರೆಗೆ ಅಪೋಲೋ ಮಿಷನ್‌ಗಳು ಚಂದ್ರನ ಮೇಲ್ಮೈಯಲ್ಲಿ ಸಿಸ್ಮೋ ಮೀಟರ್‌ಗಳನ್ನು (ಭೂಕಂಪ ಮಾಪಕಗಳು) ಸ್ಥಾಪಿಸಿದವು. ಇವು 28,000ಕ್ಕೂ ಹೆಚ್ಚು ಚಂದ್ರ ಭೂಕಂಪಗಳನ್ನು ದಾಖಲಿಸಿವೆ. ಇವುಗಳಲ್ಲಿ ಹೆಚ್ಚಿನವು ಅಲ್ಪ ಪ್ರಮಾಣದವು ಮತ್ತು ಚಂದ್ರನ ಆಳದಲ್ಲಿ ಸೃಷ್ಟಿಯಾದ ಕಂಪನಗಳು. ಈ ಪೈಕಿ ಕೆಲವು ಕಂಪನಗಳು ಚಂದ್ರನ ಮೇಲ್ಮೈ ಉದ್ದಕ್ಕೂ ಸಂಭವಿಸಿದ್ದವು. ಇದೇ ರೀತಿಯ ಕಂಪನಗಳು ಇಂದಿಗೂ ಸಕ್ರಿಯವಾಗಿವೆ.
ಚಂದ್ರನ ಭೂಕಂಪದಿಂದ ವೈಜ್ಞಾನಿಕ ಪ್ರಯೋಗಗಳಿಗೆ ಅಡ್ಡಿ..?
ಚಂದ್ರನ ಮೇಲ್ಮೈ ಭೂವೈಜ್ಞಾನಿಕವಾಗಿ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಮಾನವ ಸಹಿತ ಅಥವಾ ರೋಬೋಟಿಕ್ ಮಿಷನ್ ಕೈಗೆತ್ತಿಕೊಳ್ಳುವಾಗ ಸಾಕಷ್ಟು ಸವಾಲು ಎದುರಿಸಬೇಕಾಗಬಹುದು. ಚಂದ್ರನ ಯಾವ ಮೇಲ್ಮೈ ಸ್ಥಿರ ಎಂದು ಭಾವಿಸಲಾಗಿದೆಯೋ, ಅದೇ ಪ್ರದೇಶದಲ್ಲಿ ಕಂಪನ ಆಗಬಹುದು. ಹೀಗಾಗಿ, ಚಂದ್ರನ ಮೇಲೆ ನೆಲೆ ಸ್ಥಾಪಿಸುವ ಸಂದರ್ಭದಲ್ಲಿ ಅಪಾಯ ಎದುರಾಗಬಹುದು. ಈ ಕಾರಣದಿಂದಾಗಿ ಚಂದ್ರನ ಮೇಲ್ಮೈನಲ್ಲಿ ನೆಲೆ ನಿರ್ಮಿಸುವ ಸಂದರ್ಭದಲ್ಲಿ ಭೂಕಂಪ ಸಾಧ್ಯತೆಗಳ ಕುರಿತು ಸಮಗ್ರ ಅವಲೋಕನ ನಡೆಸುವ ಅಗತ್ಯ ಎದುರಾಗಿದೆ.
ಒಟ್ಟಾರೆ ಹೇಳಬೇಕೆಂದರೆ ಚಂದ್ರ ನಿರ್ಜೀವ ವಸ್ತುವಲ್ಲ.. ನಿರಂತರವಾಗಿ ಸಂಕುಚಿತಗೊಳ್ಳುತ್ತಿರುವ & ರೂಪ ಬದಲಿಸುತ್ತಿರುವ ಜೀವಂತ ಭೂವೈಜ್ಞಾನಿಕ ಕಾಯ.. ಇದಕ್ಕೆ ಸಾಕ್ಷಿಯಾಗಿ ಲೋಬೇಟ್ ಸ್ಕಾರ್ಪ್‌ಗಳು ಎದ್ದು ಕಾಣುತ್ತಿವೆ. ಈ ಹೊಸ ವೈಜ್ಞಾನಿಕ ಒಳನೋಟವು ವಿಜ್ಞಾನಿಗಳಿಗೆ ಮಾತ್ರವಲ್ಲ, ಚಂದ್ರನತ್ತ ನೋಡುವ ಪ್ರತಿಯೊಬ್ಬರಿಗೂ ಒಂದು ರೋಮಾಂಚಕಾರಿ ಅನುಭವ ನೀಡೋದು ಸುಳ್ಳಲ್ಲ..





