ನವದೆಹಲಿ: 2026ರ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಎತ್ತಿಕೊಂಡಿರುವ ವಿವಾದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕಠಿಣ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶದ ಮನವಿಯನ್ನು ಐಸಿಸಿ ಸ್ಪಷ್ಟವಾಗಿ ತಿರಸ್ಕರಿಸಿದೆ. ಇದರ ಜೊತೆಗೆ, ತನ್ನ ಅಂತಿಮ ನಿರ್ಧಾರವನ್ನು ತಿಳಿಸಲು ಬಾಂಗ್ಲಾದೇಶಕ್ಕೆ ಕೇವಲ 24 ಗಂಟೆಗಳ ಗಡುವು ನೀಡಿದೆ..
ಕಳೆದ ಕೆಲವು ದಿನಗಳಿಂದ “ನಮ್ಮ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ” ಎಂಬ ಹೇಳಿಕೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಹೇಳಿಕೊಂಡು ಬಂದಿತ್ತು. ಭಾರತದಲ್ಲಿ ತಂಡಕ್ಕೆ ಸೂಕ್ತ ಭದ್ರತೆ ಇಲ್ಲ ಎಂಬ ಕಾರಣ ಮುಂದಿಟ್ಟುಕೊಂಡು, ತನ್ನ ವಿಶ್ವಕಪ್ ಪಂದ್ಯಗಳನ್ನು ತಟಸ್ಥ ಸ್ಥಳವಾದ ಶ್ರೀಲಂಕಾದಲ್ಲಿ ನಡೆಸಬೇಕು ಎಂದು ಬಾಂಗ್ಲಾ ಮಂಡಳಿ ಒತ್ತಾಯಿಸುತ್ತಿತ್ತು. ಆದರೆ ಐಸಿಸಿ ಈ ಬೇಡಿಕೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ.
ಈ ವಿವಾದದ ಮೂಲ ಕಾರಣವಾಗಿ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಕೈಬಿಟ್ಟಿರುವುದು ಎನ್ನಲಾಗಿದೆ. ಈ ನಿರ್ಧಾರದಿಂದ ಕೋಪಗೊಂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಅದನ್ನೇ ಕಾರಣವನ್ನಾಗಿ ಮಾಡಿಕೊಂಡು ಭಾರತದಲ್ಲಿ ಆಡಲು ನಿರಾಕರಿಸುವ ನಿಲುವು ತಳೆದಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ಬಾಂಗ್ಲಾದೇಶದ ಬೇಡಿಕೆ ಕುರಿತು ಐಸಿಸಿ ಸದಸ್ಯ ರಾಷ್ಟ್ರಗಳ ನಡುವೆ ಮತದಾನ ನಡೆಯಿತು. ಈ ಮತದಾನದಲ್ಲಿ ಭಾರತಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಒಟ್ಟು 14 ಕ್ರಿಕೆಟ್ ಮಂಡಳಿಗಳು ಭಾರತದ ಪರವಾಗಿ ಮತ ಚಲಾಯಿಸಿವೆ. ಬಾಂಗ್ಲಾದೇಶದ ಪರವಾಗಿ ಕೇವಲ ಅದರದೇ ಮಂಡಳಿ ಹಾಗೂ ಪಾಕಿಸ್ತಾನ ಮಾತ್ರ ಮತ ಹಾಕಿದ್ದು, ಬಾಂಗ್ಲಾ ಮಂಡಳಿ 2-14 ಅಂತರದಿಂದ ಭಾರೀ ಸೋಲನ್ನು ಅನುಭವಿಸಿದೆ.
ಈ ಹಿನ್ನೆಲೆಯಲ್ಲಿ ಐಸಿಸಿ ಸ್ಪಷ್ಟ ಸಂದೇಶ ನೀಡಿದ್ದು, “ಬಾಂಗ್ಲಾದೇಶ ತಂಡವು ನಿಗದಿಯಂತೆ ಭಾರತದಲ್ಲೇ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲೇಬೇಕು.” ಜೊತೆಗೆ, ಬಾಂಗ್ಲಾದೇಶ ಸರ್ಕಾರವನ್ನು ಮನವೊಲಿಸಿ ತಂಡವನ್ನು ಭಾರತಕ್ಕೆ ಕಳುಹಿಸುವ ಜವಾಬ್ದಾರಿಯೂ ಬಿಸಿಬಿಯದ್ದೇ ಎಂದು ಐಸಿಸಿ ಸೂಚಿಸಿದೆ.
ಇದಕ್ಕೂ ಒಪ್ಪದಿದ್ದರೆ ಪರಿಣಾಮ ಗಂಭೀರವಾಗಲಿದೆ. ಬಾಂಗ್ಲಾದೇಶ ತನ್ನ ಹಠವನ್ನು ಮುಂದುವರಿಸಿದರೆ, ತಂಡವನ್ನು ಟಿ20 ವಿಶ್ವಕಪ್‌ನಿಂದಲೇ ಹೊರಗಿಡಲಾಗುತ್ತದೆ ಎಂದು ಐಸಿಸಿ ಎಚ್ಚರಿಸಿದೆ. ಅಂಥ ಪರಿಸ್ಥಿತಿ ನಿರ್ಮಾಣವಾದರೆ, ಬಾಂಗ್ಲಾದೇಶದ ಸ್ಥಾನದಲ್ಲಿ ಸ್ಕಾಟ್ಲೆಂಡ್ ತಂಡವನ್ನು ವಿಶ್ವಕಪ್‌ಗೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಈ ಬೆಳವಣಿಗೆಯಿಂದ ಬಾಂಗ್ಲಾದೇಶ ಕ್ರಿಕೆಟ್ ವಲಯದಲ್ಲಿ ಆತಂಕ ಹೆಚ್ಚಾಗಿದೆ. ವಿಶ್ವಕಪ್‌ನಂತಹ ಮಹತ್ವದ ಟೂರ್ನಿಯಿಂದ ಹೊರಬಿದ್ದರೆ, ಅದು ದೇಶದ ಆಟಗಾರರಿಗೆ ಮಾತ್ರವಲ್ಲ, ಬಾಂಗ್ಲಾ ಕ್ರಿಕೆಟ್‌ನ ಭವಿಷ್ಯಕ್ಕೂ ಭಾರೀ ಹೊಡೆತ ನೀಡಲಿದೆ ಎಂದು ಹಲವಾರು ಮಾಜಿ ಬಾಂಗ್ಲಾದೇಶ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





