ಲಂಡನ್ನಲ್ಲಿ ನಡೆದ ಚಾರಿಟಿ ಈವೆಂಟ್ ಒಂದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ಶುಭ್ಮನ್ ಗಿಲ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 8ರಂದು ಯುವರಾಜ್ ಸಿಂಗ್ ಅವರ ಯುವಿಕ್ಯಾನ್ ಫೌಂಡೇಶನ್ ಆಯೋಜಿಸಿದ ಡಿನ್ನರ್ನಲ್ಲಿ ಈ ಫೋಟೋ ತೆಗೆಯಲಾಗಿತ್ತು. ಫೋಟೋದಲ್ಲಿ ಶುಭನ್ ಗಿಲ್ ಸಾರಾ ತೆಂಡೂಲ್ಕರ್ ಕಡೆಗೆ ನಗುತ್ತಾ ನೋಡುತ್ತಿರುವ ದೃಶ್ಯ ವೈರಲ್ ಆಗಿದೆ.
ಈ ಕಾರ್ಯಕ್ರಮದಲ್ಲಿ ಭಾರತ ತಂಡದ ಹಲವು ಕ್ರಿಕೆಟಿಗರು, ಗಣ್ಯರು ಮತ್ತು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಶುಭ್ಮನ್ ಗಿಲ್ ಆಕರ್ಷಕ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಹತ್ತಿರದಲ್ಲಿ ಕುಳಿತಿದ್ದ ಸಾರಾ ಕಡೆಗೆ ನಗುತ್ತಿರುವ ದೃಶ್ಯ ಫೋಟೋದಲ್ಲಿ ಸೆರೆಯಾಗಿದೆ. ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಗಿಲ್ನ ನಗುವಿನ ಹಿಂದಿನ ಭಾವನೆಯನ್ನು ಊಹಿಸಲು ಶುರುಮಾಡಿದ್ದಾರೆ. ಕೆಲವರು ಇದು ಕೇವಲ ಸ್ನೇಹ ಎಂದರೆ, ಇನ್ನೂ ಕೆಲವರು ಇದು ಪ್ರೀತಿಯ ಸಂಕೇತವೆಂದು ಚರ್ಚಿಸುತ್ತಿದ್ದಾರೆ.
ಶುಭ್ಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಬಗ್ಗೆ ಊಹಾಪೋಹಗಳು ಹೊಸದೇನಲ್ಲ. ಕಳೆದ ಕೆಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರಿಬ್ಬರ ನಡುವಿನ ಸಂಬಂಧದ ಕುರಿತು ಗುಸುಗುಸು ನಡೆಯುತ್ತಿದೆ. ಒಬ್ಬರಿಬ್ಬರ ಪೋಸ್ಟ್ಗಳಿಗೆ ಲೈಕ್ ಮಾಡುವುದು, ಕಾಮೆಂಟ್ಗಳನ್ನು ಹಾಕುವುದು, ಕೆಲವೊಮ್ಮೆ ಒಂದೇ ರೀತಿಯ ಕ್ಯಾಪ್ಶನ್ಗಳನ್ನು ಬಳಸುವುದು ಈ ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ, ಶುಭ್ಮನ್ ಗಿಲ್ ಮತ್ತು ಸಾರಾ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಏಪ್ರಿಲ್ 2025 ರಲ್ಲಿ, ಶುಭ್ಮನ್ ಗಿಲ್ ತಾನು ಕ್ರಿಕೆಟ್ಗೆ ಸಂಪೂರ್ಣವಾಗಿ ಮೀಸಲಾಗಿರುವ ಕಾರಣ ಕಳೆದ ಮೂರು ವರ್ಷಗಳಿಂದ ಸಿಂಗಲ್ ಆಗಿರುವುದಾಗಿ ಹೇಳಿದ್ದರು. ಇನ್ನೊಂದೆಡೆ, ಮೇ 2025 ರಲ್ಲಿ ಸಾರಾ ತೆಂಡೂಲ್ಕರ್ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಆ ಜೋಡಿ ಶೀಘ್ರದಲ್ಲೇ ಬೇರೆಯಾಯಿತು ಎಂದು ವರದಿಯಾಗಿತ್ತು. ಈ ಎಲ್ಲಾ ವದಂತಿಗಳ ನಡುವೆಯೂ, ಲಂಡನ್ನ ಈ ಫೋಟೋ ಶುಭ್ಮನ್ ಗಿಲ್ ಮತ್ತು ಸಾರಾ ಬಗ್ಗೆ ಜನರ ಕುತೂಹಲವನ್ನು ಮತ್ತೆ ಚಿಗುರಿಸಿದೆ.





