ಬೆಂಗಳೂರು: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ಸದ್ಯ ಕೇವಲ ಸಿನಿಮಾಗಳಿಂದಷ್ಟೇ ಅಲ್ಲದೆ, ಐಪಿಎಲ್ ಕ್ರಿಕೆಟ್ ಮೈದಾನದ ಹೊರಗಿನ ರಾಜಕೀಯ ವಿವಾದಗಳಿಂದಲೂ ಭಾರಿ ಸುದ್ದಿಯಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮಾಲೀಕರಾಗಿರುವ ಶಾರುಖ್ ಖಾನ್, ಇತ್ತೀಚಿನ ಐಪಿಎಲ್ ಹರಾಜಿನಲ್ಲಿ ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನ ಖರೀದಿಸಿರುವುದು ಈಗ ದೊಡ್ಡ ಮಟ್ಟದ ಕಿಚ್ಚು ಹಚ್ಚಿದೆ.
ವಿವಾದದ ಕಿಡಿ ಹೊತ್ತಿಸಿದ್ದು ಯಾವುದು ?
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಅಲ್ಲಿನ ಅಸ್ಥಿರತೆಯ ಹಿನ್ನೆಲೆಯಲ್ಲಿ ಭಾರತೀಯರಲ್ಲಿ ಆಕ್ರೋಶ ಮನೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಅವರು ಬಾಂಗ್ಲಾದೇಶದ ಆಟಗಾರನ ಮೇಲೆ 9.20 ಕೋಟಿ ರೂ.ಗಳ ಭಾರಿ ಹೂಡಿಕೆ ಮಾಡಿರುವುದು ಹಲವರ ಕಣ್ಣು ಕೆಂಪಾಗಿಸಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಶಿವಸೇನೆ (UBT), ಬಿಜೆಪಿ ನಾಯಕರು ಮತ್ತು ಹಿಂದೂ ಧರ್ಮಗುರುಗಳು ಶಾರುಖ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಜಗದ್ಗುರು ರಾಮಭದ್ರಾಚಾರ್ಯ ತೀವ್ರ ವಾಗ್ದಾಳಿ
ಪ್ರಖ್ಯಾತ ಹಿಂದೂ ಧರ್ಮಗುರು ಜಗದ್ಗುರು ರಾಮಭದ್ರಾಚಾರ್ಯ ಅವರು ಶಾರುಖ್ ಖಾನ್ ವಿರುದ್ಧ ಅತ್ಯಂತ ಕಠಿಣ ಪದ ಬಳಸಿ ಆಕ್ರೋಶ ಹೊರಹಾಕಿದ್ದಾರೆ. ಶಾರುಖ್ ಖಾನ್ ಅವರಿಗೆ ಯಾವುದೇ ಚರಿತ್ರೆ ಇಲ್ಲ, ಅವರು ಒಬ್ಬ ದೇಶದ್ರೋಹಿ. ಭಾರತದ ನೆಲದಲ್ಲಿ ಹಣ ಗಳಿಸಿ, ಭಾರತದ ವಿರುದ್ಧ ಕೆಲಸ ಮಾಡುವ ದೇಶದ ಆಟಗಾರರಿಗೆ ಮಣೆ ಹಾಕುತ್ತಿರುವುದು ಅವರ ದೇಶದ್ರೋಹಿ ಮನಸ್ಥಿತಿಯನ್ನು ಪದೇ ಪದೇ ಸಾಬೀತು ಮಾಡುತ್ತಿದೆ. ಅವರು ನಿಜವಾದ ಹಿರೋ ಅಲ್ಲವೇ ಅಲ್ಲ ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ, ಆಧ್ಯಾತ್ಮಿಕ ಗುರು ದೇವಕಿನಂದನ್ ಠಾಕೂರ್ ಕೂಡ ಧ್ವನಿಗೂಡಿಸಿದ್ದು, ಈ ಹಣವನ್ನು ಬಾಂಗ್ಲಾದಲ್ಲಿ ಹತ್ಯೆಗೀಡಾದ ಹಿಂದೂಗಳ ಕುಟುಂಬಕ್ಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಶಿವಸೇನೆ ಮತ್ತು ರಾಜಕೀಯ ನಾಯಕರ ಎಚ್ಚರಿಕೆ:
ಶಿವಸೇನೆ (UBT) ವಕ್ತಾರ ಆನಂದ್ ದುಬೆ ಮತ್ತು ಸಂಜಯ್ ನಿರುಪಮ್ ಅವರು ಶಾರುಖ್ ಖಾನ್ ಅವರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶದ ಆಟಗಾರರನ್ನು ಕೂಡಲೇ ತಂಡದಿಂದ ಕೈಬಿಡಬೇಕು. ಹಿಂದೂಗಳ ರಕ್ತ ಹರಿಸುವ ದೇಶದವರೊಂದಿಗೆ ಕ್ರೀಡಾ ಸಂಬಂಧ ಬೇಕಿಲ್ಲ. ಶಾರುಖ್ ಅವರಿಗೆ ದೇಶದ ಜನರ ಭಾವನೆ ಅರ್ಥವಾಗದಿದ್ದರೆ ಅವರು ಇಲ್ಲಿರಲು ಅರ್ಹರಲ್ಲ ಎಂಬರ್ಥದ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿ ನಾಯಕ ಸಂಗೀತ್ ಸೋಮ್ ಕೂಡ ಶಾರುಖ್ ಅವರನ್ನು ‘ಗದ್ದಾರ್’ (ದೇಶದ್ರೋಹಿ) ಎಂದು ಕರೆದಿದ್ದಾರೆ.
ಬಿಸಿಸಿಐ ಮಧ್ಯಪ್ರವೇಶ:
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ಬಿಸಿಸಿಐ (BCCI), ಸಾರ್ವಜನಿಕ ಭಾವನೆಗಳಿಗೆ ಗೌರವ ನೀಡಿ ಮುಸ್ತಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕೆಕೆಆರ್ ತಂಡಕ್ಕೆ ಸೂಚನೆ ನೀಡಿದೆ ಎನ್ನಲಾಗಿದೆ.





