ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಆಟಗಾರ ರಿಂಕು ಸಿಂಗ್ ಅವರ ತಂದೆ ಖಾನ್‌ಚಂದ್ ಸಿಂಗ್ (65) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಉತ್ತರ ಪ್ರದೇಶದ ಅಲಿಘರ್ ನಿವಾಸಿಯಾದ ಅವರು ದೀರ್ಘಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ರಿಂಕು ಸಿಂಗ್, ತಂದೆಯ ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದಾರೆ.
ಕೊನೆಯ ಕ್ಷಣದವರೆಗೂ ಮೈದಾನದಲ್ಲಿದ್ದ ರಿಂಕು
ರಿಂಕು ಸಿಂಗ್ ಅವರ ತಂದೆಯನ್ನು ಗ್ರೇಟರ್ ನೋಯ್ಡಾದ ಯಥಾರ್ಥ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಪರಿಸ್ಥಿತಿ ಗಂಭೀರವಾದ ಕಾರಣ ಅವರನ್ನು ವೆಂಟಿಲೇಟರ್‌ಗೆ ಸ್ಥಳಾಂತರಿಸಲಾಗಿತ್ತು. ನಿನ್ನೆ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯ ವಿಚಾರಿಸಿದ್ದ ರಿಂಕು, ವಾಪಸ್ ಬಂದು ಪಂದ್ಯದಲ್ಲಿ ಫೀಲ್ಡಿಂಗ್ ಕೂಡ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಮೃತಪಟ್ಟಿದ್ದಾರೆ. ಸದ್ಯ ರಿಂಕು ಸಿಂಗ್ ಅಲಿಘರ್‌ನಲ್ಲಿ ನಡೆಯಲಿರುವ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಟೂರ್ನಿಯಿಂದ ವಿರಾಮ ಪಡೆದಿದ್ದಾರೆ.
Rinku Singh’s father has passed away. He left the tournament in the morning to be with his family. But none of the players seem to be showing any sadness for him. At least today, they should avoid making reels or funny videos.🙏
— 𝐑𝐮𝐬𝐡𝐢𝐢𝐢⁴⁵ (@rushiii_12) February 27, 2026
ವಿವಾದಕ್ಕೆ ಕಾರಣವಾದ ಅಕ್ಷರ್-ಅರ್ಶ್‌ದೀಪ್ ವಿಡಿಯೋ
ರಿಂಕು ಸಿಂಗ್ ಕುಟುಂಬ ದುಃಖದಲ್ಲಿರುವಾಗಲೇ ಟೀಮ್ ಇಂಡಿಯಾದ ಅಕ್ಷರ್ ಪಟೇಲ್ ಮತ್ತು ಅರ್ಶ್‌ದೀಪ್ ಸಿಂಗ್ ಹಂಚಿಕೊಂಡ ವಿಡಿಯೋವೊಂದು ವಿವಾದ ಸೃಷ್ಟಿಸಿದೆ. ವಿಮಾನದಲ್ಲಿ ಕುಳಿತು ಜಸ್‌ಪ್ರೀತ್ ಬುಮ್ರಾ ಅವರಿಗಾಗಿ ಹುಡುಕಾಟ ನಡೆಸುವ ಹಾಸ್ಯಾಸ್ಪದ ವಿಡಿಯೋವನ್ನು ಇಬ್ಬರೂ ಆಟಗಾರರು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಕಂಡು ಕೆರಳಿದ ನೆಟ್ಟಿಗರು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಂಡದ ಪ್ರಮುಖ ಆಟಗಾರರೊಬ್ಬರು ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಇಂತಹ ಸಮಯದಲ್ಲಿ ಕನಿಷ್ಠ ಶೋಕ ವ್ಯಕ್ತಪಡಿಸುವ ಸೌಜನ್ಯವೂ ಇಲ್ಲದೆ ರೀಲ್ಸ್ ಮತ್ತು ಫನ್ನಿ ವಿಡಿಯೋ ಮಾಡುತ್ತಿರುವುದು ಸರಿಯಲ್ಲ. ಕ್ರಿಕೆಟಿಗರು ಇಂತಹ ಸಮಯದಲ್ಲಾದರೂ ವಿಡಿಯೋ ಮಾಡುವುದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಆಟಗಾರರ ವಿರುದ್ಧ ಕಿಡಿಕಾರುವವರು ಮೊದಲು ಸತ್ಯ ತಿಳಿಯಲಿ, ರಿಂಕು ಸಿಂಗ್‌ಗೆ ಅವರು ವೈಯಕ್ತಿಕವಾಗಿ ಸಮಾಧಾನ ಹೇಳಿರಬಹುದು. ಕೇವಲ ರೀಚ್‌ಗಾಗಿ ಆಟಗಾರರ ವ್ಯಕ್ತಿತ್ವ ನಿಂದಿಸುವುದು ತಪ್ಪು ಎಂದು ಆಟಗಾರರ ಪರವಾಗಿ ಕೆಲವರು ಬ್ಯಾಟ್ ಬೀಸಿದ್ದಾರೆ. ಒಟ್ಟಿನಲ್ಲಿ ವಿಶ್ವಕಪ್ ಟೂರ್ನಿಯ ಮಧ್ಯೆ ನಡೆದ ಈ ಘಟನೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಸುದ್ದಿಯಾಗಿದೆ.





