ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಂಕು ಸಿಂಗ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ರಿಂಕು ಜೂನ್ 8, 2025 ರ ಭಾನುವಾರ ಲಕ್ಕೋದ ಹೋಟೆಲ್‌ವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡಿದ ನಂತರ ರಿಂಕು ತಮ್ಮ ವೈಯಕ್ತಿಕ ಜೀವನದಲ್ಲಿ ಈ ಮಹತ್ವದ ಹೆಜ್ಜೆ ಇಡುತ್ತಿದ್ದಾರೆ.
ಕಳೆದ ವರ್ಷ ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಆಗ ಪ್ರಿಯಾ ಅವರ ತಂದೆ ತೂಫಾನ್ ಸರೋಜ್, “ನಾವಿನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಕೇವಲ ಮಾತುಕತೆಯ ಹಂತದಲ್ಲಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದರು. ಈಗ ತೂಫಾನ್ ಸರೋಜ್ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ. “ರಿಂಕು ಮತ್ತು ಪ್ರಿಯಾ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟಿದ್ದಾರೆ. ಆದರೆ ಈ ಸಂಬಂಧಕ್ಕೆ ಕುಟುಂಬಗಳ ಒಪ್ಪಿಗೆ ಅಗತ್ಯವಿತ್ತು. ಎರಡೂ ಕುಟುಂಬಗಳು ಈ ಮದುವೆಗೆ ಸಮ್ಮತಿಸಿವೆ,” ಎಂದು ಅವರು ಹೇಳಿದ್ದಾರೆ.
ಪ್ರಿಯಾ ಸರೋಜ್: ದೇಶದ ಕಿರಿಯ ಸಂಸದೆ
26 ವರ್ಷದ ಪ್ರಿಯಾ ಸರೋಜ್ ಭಾರತದ ಎರಡನೇ ಅತಿ ಕಿರಿಯ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉತ್ತರ ಪ್ರದೇಶದ ಮಾಜಿ ಸಂಸದ ಮತ್ತು ಶಾಸಕರಾಗಿರುವ ತೂಫಾನ್ ಸರೋಜ್ ಅವರ ಪುತ್ರಿಯಾದ ಪ್ರಿಯಾ, 2024ರ ಲೋಕಸಭಾ ಚುನಾವಣೆಯಲ್ಲಿ ಮಚ್ಚಿಶಹರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ವಾರಣಸಿಯಲ್ಲಿ ಜನಿಸಿದ ಪ್ರಿಯಾ ವೃತ್ತಿಯಲ್ಲಿ ವಕೀಲೆಯಾಗಿದ್ದು, ತಮ್ಮ ರಾಜಕೀಯ ಮತ್ತು ಕಾನೂನು ಕ್ಷೇತ್ರದ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಚುನಾವಣಾ ಗೆಲುವಿನ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ.
ರಿಂಕು ಸಿಂಗ್ ಐಪಿಎಲ್ 2023ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದರು. ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ ರಿಂಕು, ತಕ್ಷಣವೇ ದೇಶಾದ್ಯಂತ ಚರ್ಚೆಗೆ ಗ್ರಾಸವಾದರು. ಈ ಪ್ರದರ್ಶನದ ಮೂಲಕ ಟೀಂ ಇಂಡಿಯಾಕ್ಕೆ ಆಯ್ಕೆಯಾದ ರಿಂಕು, ಭಾರತದ ಪರ 2 ಏಕದಿನ ಮತ್ತು 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 46.1ರ ಸರಾಸರಿಯಲ್ಲಿ 546 ರನ್ ಗಳಿಸಿರುವ ಅವರು, ಶಾರ್ಟ್ ಫಾರ್ಮೆಟ್‌ನಲ್ಲಿ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 55 ರನ್ ಗಳಿಸಿರುವ ರಿಂಕು, ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಸಜ್ಜಾಗಿದ್ದಾರೆ.