ಕಳೆದ ಸೀಸನ್‌ನಲ್ಲಿ ಚೊಚ್ಚಲ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಈಗ ತನ್ನ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಅಬುಧಾಬಿಯಲ್ಲಿ ಮಂಗಳವಾರ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಅತ್ಯಂತ ಜಾಣ್ಮೆಯ ನಡೆಗಳನ್ನು ಪ್ರದರ್ಶಿಸಿದ್ದು, ಆಲ್‌ರೌಂಡರ್ ಮತ್ತು ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಮಾಡಿದ ಅತ್ಯಂತ ದೊಡ್ಡ ಖರೀದಿ ಎಂದರೆ ಮಾಜಿ ಕೆಕೆಆರ್ ಆಟಗಾರ ವೆಂಕಟೇಶ್ ಅಯ್ಯರ್. ಹರಾಜಿಗೆ ಪ್ರವೇಶಿಸಿದಾಗ ಆರ್‌ಸಿಬಿ ಬಳಿ 16.40 ಕೋಟಿ ರೂ. ಮೊತ್ತವಿತ್ತು. ದೀರ್ಘಾವಧಿಯ ಬಿಡ್ಡಿಂಗ್ ನಂತರ, 7 ಕೋಟಿ ರೂಪಾಯಿ ನೀಡಿ ಅಯ್ಯರ್ ಅವರನ್ನು ತಂಡಕ್ಕೆ ಸೆಳೆದುಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಕುತೂಹಲಕಾರಿ ಅಂಶವೆಂದರೆ, ಈ ಹಿಂದೆ 23.75 ಕೋಟಿ ರೂ. ಸಂಬಳ ಪಡೆಯುತ್ತಿದ್ದ ಅಯ್ಯರ್ ಅವರ ಸಂಭಾವನೆಯಲ್ಲಿ ಈ ಬಾರಿ ಶೇ. 70.52 ರಷ್ಟು ಇಳಿಕೆಯಾಗಿದೆ. ಆದರೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ಜೊತೆಗೆ ಮಧ್ಯಮ ವೇಗದ ಬೌಲಿಂಗ್ ಮಾಡಬಲ್ಲ ಅಯ್ಯರ್ ಸೇರ್ಪಡೆ ಆರ್‌ಸಿಬಿಗೆ ಆನೆಬಲ ತಂದಿದೆ.
ಆರ್‌ಸಿಬಿ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಎಂಪಿ ಟಿ20 ಲೀಗ್‌ನಲ್ಲಿ ಮಿಂಚಿದ್ದ ಯುವ ವೇಗಿ ಮಂಗೇಶ್ ಯಾದವ್ ಅವರ ಮೇಲೆ ಅತಿ ಹೆಚ್ಚು ಅಂದರೆ 5.20 ಕೋಟಿ ರೂ. ಹೂಡಿಕೆ ಮಾಡಿದೆ. ಮಂಗೇಶ್ ಇತ್ತೀಚೆಗೆ ನಡೆದ ದೇಶೀಯ ಲೀಗ್‌ನಲ್ಲಿ 14 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ಇವರ ಜೊತೆಗೆ ನ್ಯೂಜಿಲೆಂಡ್‌ನ ವೇಗಿ ಜಾಕೋಬ್ ಡಫಿ ಅವರನ್ನು 2 ಕೋಟಿ ರೂ.ಗೆ ಖರೀದಿಸಲಾಗಿದೆ. ಡಫಿ ಅವರು ತಂಡದ ಪ್ರಮುಖ ವೇಗಿ ಜೋಶ್ ಹ್ಯಾಜಲ್‌ವುಡ್‌ಗೆ ಅತ್ಯುತ್ತಮ ಬ್ಯಾಕ್ಅಪ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಸಾತ್ವಿಕ್ ದೇಸ್ಥಾಲ್ (30 ಲಕ್ಷ ರೂ.) ಮತ್ತು ಜೋರ್ಡಾನ್ ಕೋಕ್ಸ್ (75 ಲಕ್ಷ ರೂ.) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
2025ರಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ರಜತ್ ಪಾಟಿದಾರ್ ಅವರ ಸಾರಥ್ಯದಲ್ಲೇ ತಂಡ ಮುನ್ನಡೆಯಲಿದ್ದು, ವಿರಾಟ್ ಕೊಹ್ಲಿ ತಂಡದ ಆಧಾರಸ್ತಂಭವಾಗಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ಮಂಗೇಶ್ ಯಾದವ್ ಅವರಂತಹ ಆಲ್‌ರೌಂಡರ್‌ಗಳ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮತೋಲನ ಹೆಚ್ಚಿದೆ.
ಉಳಿಸಿಕೊಂಡ ಆಟಗಾರರು : ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಅಭಿನಂದನ್ ಸಿಂಗ್, ಭುವನೇಶ್ವರ್ ಕುಮಾರ್, ದೇವದತ್ ಪಡಿಕ್ಕಲ್, ಜೇಕಬ್ ಬೆಥೆಲ್, ಜಿತೇಶ್ ಶರ್ಮಾ, ಜೋಶ್ ಹ್ಯಾಜಲ್‌ವುಡ್, ಕೃನಾಲ್ ಪಾಂಡ್ಯ, ನುವಾನ್ ತುಷಾರ, ಫಿಲ್ ಸಾಲ್ಟ್, ರಸಿಖ್ ದಾರ್, ರೊಮಾರಿಯೋ ಶಫರ್ಡ್, ಸುಯಾಶ್ ಶರ್ಮಾ, ಸ್ವಪ್ನಿಲ್ ಸಿಂಗ್, ವಿಶಾಲ್ ಸಿಂಗ್.
ಹರಾಜಿನಲ್ಲಿ ಖರೀದಿಸಿದವರು :
-
ವೆಂಕಟೇಶ್ ಅಯ್ಯರ್ (7 ಕೋಟಿ ರೂ.)
-
ಮಂಗೇಶ್ ಯಾದವ್ (5.20 ಕೋಟಿ ರೂ.)
-
ಜಾಕೋಬ್ ಡಫಿ (2 ಕೋಟಿ ರೂ.)
-
ಜೋರ್ಡಾನ್ ಕೋಕ್ಸ್ (75 ಲಕ್ಷ ರೂ.)
-
ಸಾತ್ವಿಕ್ ದೇಸ್ಮಾಲ್ (30 ಲಕ್ಷ ರೂ.)
ಈ ಸಮತೋಲಿತ ತಂಡದೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.





