ಬೆಂಗಳೂರು, ಏಪ್ರಿಲ್ 4: ಕ್ರಿಕೆಟ್ ಅಭಿಮಾನಿಗಳು ಭಾರೀ ನಿರೀಕ್ಷೆಯೊಂದಿಗೆ ಕಾದು ಕುಳಿತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ವೇದಿಕೆ ಸಿದ್ಧಗೊಂಡಿದೆ. ಹಾಲಿ IPL 2026 ಆವೃತ್ತಿಯಲ್ಲಿ ಎರಡೂ ತಂಡಗಳ ಮೊದಲ ಮುಖಾಮುಖಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಅಣಿಯಾಗಿದೆ. ಭಾನುವಾರ (ಏಪ್ರಿಲ್ 5) ರಾತ್ರಿ 7:30 ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ, ಹವಾಮಾನ ವರದಿ ಮತ್ತು ಮುಖಾಮುಖಿ ದಾಖಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಟಿ20 ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗಸಮಾನವಾದ ಮೈದಾನವಾಗಿದೆ. ಕ್ರೀಡಾಂಗಣದ ಸಣ್ಣ ಬೌಂಡರಿಗಳು ಈ ಟ್ರ್ಯಾಕ್‌ನಲ್ಲಿ ಬ್ಯಾಟರ್‌ಗಳಿಗೆ ಇನ್ನಷ್ಟು ಅನುಕೂಲವನ್ನು ನೀಡುತ್ತವೆ. ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಸ್ವಲ್ಪ ತಿರುವು ಮತ್ತು ಸಹಾಯ ಸಿಗುವ ನಿರೀಕ್ಷೆಯಿದೆ. ಆದರೆ ಒಟ್ಟಾರೆಯಾಗಿ, ಈ ಸಮತಟ್ಟಾದ ಮೈದಾನದಲ್ಲಿ ವಿಕೆಟ್‌ಗಳನ್ನು ಪಡೆಯಲು ವೇಗದ ಬೌಲರ್‌ಗಳು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಸಿಕ್ಕರೂ, ಸ್ವಲ್ಪ ಸಮಯದ ನಂತರ ಬ್ಯಾಟರ್‌ಗಳಿಗೆ ರನ್ ಕೂಡಿಸಲು ಸುಲಭವಾಗುತ್ತದೆ.
ಹವಾಮಾನ ವರದಿ- ಮಳೆ ಭೀತಿ ಇಲ್ಲ
ರಾಜ್ಯದ ಕೆಲವೆಡೆ ಭಾರೀ ಮಳೆಯಾಗುತ್ತಿದ್ದರೂ, ಭಾನುವಾರದ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯದ ದಿನದಂದು ತಾಪಮಾನ ಸುಮಾರು 23°C ಇರುವ ನಿರೀಕ್ಷೆಯಿದೆ.. ಮೋಡ ಕವಿದ ವಾತಾವರಣವಿದ್ದರೂ, ಮಳೆಯ ಸಾಧ್ಯತೆ ಅತ್ಯಂತ ಕಡಿಮೆ. ಒಂದೊಮ್ಮೆ ಪಂದ್ಯದ ವೇಳೆ ಮಳೆ ಬಂದರೂ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆಯು 15-20 ನಿಮಿಷಗಳಲ್ಲಿ ಮೈದಾನವನ್ನು ಪಂದ್ಯಕ್ಕೆ ಸಜ್ಜುಗೊಳಿಸುವ ಸಾಮರ್ಥ್ಯ ಹೊಂದಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ದಾಖಲೆಗಳು
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದುವರೆಗೆ 46 IPL ಪಂದ್ಯಗಳು ನಡೆದಿವೆ. ಈ ಪೈಕಿ ಚೇಸಿಂಗ್ (ಮೊದಲು ಫೀಲ್ಡಿಂಗ್) ನಡೆಸಿದ ತಂಡಗಳೇ ಹೆಚ್ಚಾಗಿ ಗೆಲುವು ಸಾಧಿಸಿವೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡ 18 ಬಾರಿ ಗೆದ್ದಿದೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170-180 ರನ್‌ಗಳಾಗಿದೆ. ಟಾಸ್ ಗೆದ್ದ ನಾಯಕರು ಸಾಮಾನ್ಯವಾಗಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಮುಖಾಮುಖಿ ದಾಖಲೆ- ಚೆನ್ನೈಗೆ ಮೇಲುಗೈ
ಆರ್‌ಸಿಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇದುವರೆಗಿನ IPL ಇತಿಹಾಸದಲ್ಲಿ 35 ಬಾರಿ ಮುಖಾಮುಖಿಯಾಗಿವೆ. ಚೆನ್ನೈ 21 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ ಕೇವಲ 13 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ರಹಿತವಾಗಿದೆ. ಆದರೆ ಹಾಲಿ ಆವೃತ್ತಿಯಲ್ಲಿ ಚೆನ್ನೈ ಸತತ ಎರಡು ಸೋಲು ಕಂಡಿರುವುದರಿಂದ, ಅವರ ಪ್ರದರ್ಶನ ನೋಡುವಾಗ ಆರ್‌ಸಿಬಿ ಸುಲಭವಾಗಿ ಪಂದ್ಯ ಗೆಲ್ಲುವ ಸಾಧ್ಯತೆಯಿದೆ. RCB ತನ್ನ ಉದ್ಘಾಟನಾ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿದೆ.
ಸಂಭಾವ್ಯ ಆಡುವ ಬಳಗ (Playing XI)
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್ / ಸುಯಶ್ ಶರ್ಮಾ.
ಚೆನ್ನೈ ಸೂಪರ್ ಕಿಂಗ್ಸ್ (CSK)
ಸಂಜು ಸ್ಯಾಮ್ಸನ್ (ವಿ.ಕೀ.), ಋತುರಾಜ್ ಗಾಯಕ್ವಾಡ್ (ನಾಯಕ), ಆಯುಷ್ ಮಾತ್ರೆ, ಸರ್ಫರಾಜ್ ಖಾನ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ನೂರ್ ಅಹ್ಮದ್, ಅಂಶುಲ್ ಕಾಂಬೋಜ್, ಮ್ಯಾಟ್ ಹೆನ್ರಿ, ಖಲೀಲ್ ಅಹಮದ್.





