ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2025-26ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಆದರೆ ಎರಡನೇ ದಿನದಾಟದ ವೇಳೆ ಕ್ರೀಡಾಭಿಮಾನಿಗಳನ್ನು ಬೆಚ್ಚಿಬೀಳಿಸುವ ಘಟನೆ ಮೈದಾನದಲ್ಲೇ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ಹಾಗೂ ಕರ್ನಾಟಕದ ಫೀಲ್ಡರ್ ಕೆವಿ ಅನೀಶ್ ನಡುವೆ ಮಾತಿನ ಚಕಮಕಿ ಜಗಳಕ್ಕೆ ತಿರುಗಿ ಪರಿಸ್ಥಿತಿ, ಕೆಲ ಹೊತ್ತಿಗೆ ಉದ್ವಿಗ್ನಗೊಂಡಿತು.
ಜಮ್ಮು ಮತ್ತು ಕಾಶ್ಮೀರದ ಇನ್ನಿಂಗ್ಸ್‌ನ 100ನೇ ಓವರ್ ವೇಳೆ ಈ ಘಟನೆ ಸಂಭವಿಸಿದೆ. ಪ್ರಸಿದ್ಧ್ ಕೃಷ್ಣ ಎಸೆದ ಚೆಂಡನ್ನು ಪರಾಸ್ ಡೋಗ್ರಾ ಗಲ್ಲಿ ದಿಕ್ಕಿನಲ್ಲಿ ಆಡುವ ಪ್ರಯತ್ನ ಮಾಡಿದರು. ಅಲ್ಲಿದ್ದ ಫೀಲ್ಡರ್ ಡೈವ್ ಮಾಡಿ ಚೆಂಡನ್ನು ತಡೆಯಲು ಯತ್ನಿಸಿದರೂ, ಅದು ಬೌಂಡರಿ ಗೆರೆ ದಾಟಿತು. ಈ ಸಂದರ್ಭ ಸಿಲ್ಲಿ ಪಾಯಿಂಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅನೀಶ್ ಮತ್ತು ಡೋಗ್ರಾ ನಡುವೆ ಮಾತಿನ ಚಕಮಕಿ ಆರಂಭವಾಯಿತು.
ಮಾತಿನ ಜಗಳ ಹೆಚ್ಚಾಗುತ್ತಾ, ಡೋಗ್ರಾ ಅನೀಶ್ ಅವರ ತಲೆಗೆ ಡಿಕ್ಕಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮೈದಾನದಲ್ಲಿ ಕೆಲ ಕ್ಷಣಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಕರ್ನಾಟಕದ ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಮುಂದಾದರು. ಅವರು ಡೋಗ್ರಾ ಜೊತೆ ವಾಗ್ವಾದ ನಡೆಸಿದರು.
ಘಟನೆಯನ್ನು ಗಮನಿಸಿದ ಅಂಪೈರ್‌ಗಳು ಕೂಡಲೇ ಮಧ್ಯಪ್ರವೇಶಿಸಿ ಇಬ್ಬರು ಆಟಗಾರರನ್ನು ಬೇರ್ಪಡಿಸಿದರು. ನಂತರ ಕರ್ನಾಟಕದ ನಾಯಕ ದೇವದತ್ ಪಡಿಕ್ಕಲ್ ಅವರೊಂದಿಗೆ ಮಾತನಾಡಿದ ಅಂಪೈರ್‌ಗಳು, ಫೀಲ್ಡಿಂಗ್ ತಂಡ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಈ ನಡುವೆಯೇ ಡೋಗ್ರಾ ಅನೀಶ್ ಬಳಿ ಕ್ಷಮೆಯಾಚಿಸಲು ಪ್ರಯತ್ನಿಸಿದರೂ, ಅನೀಶ್ ಅದನ್ನು ಸ್ವೀಕರಿಸಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ. ಘಟನೆ ಬಳಿಕ ಆಟ ಮುಂದುವರೆತ್ತು.
ಇದಕ್ಕಿಂತ ಹೆಚ್ಚಾಗಿ, ದಿನದಾಟದ ಅಂತ್ಯದ ವೇಳೆಗೆ ವಾತಾವರಣ ಕೂಡ ಪಂದ್ಯಕ್ಕೆ ಅಡ್ಡಿಯಾಯಿತು. ತೀವ್ರ ಮೋಡಕವಿದ ಪರಿಸ್ಥಿತಿ ಹಾಗೂ ಬೆಳಕಿನ ಕೊರತೆ ಹಿನ್ನೆಲೆ, ಅಂಪೈರ್‌ಗಳು ಲೈಟ್ ಮೀಟರ್ ಮೂಲಕ ಪರಿಶೀಲನೆ ನಡೆಸಿ ಪಂದ್ಯವನ್ನು ಸ್ಥಗಿತಗೊಳಿಸಿದರು. ದಿನದ ಆಟದ ಅವಧಿ ಮುಗಿಯಲು ಇನ್ನೂ ಒಂದು ಗಂಟೆ ಬಾಕಿ ಇರುವಾಗಲೇ ಬ್ಯಾಡ್ ಲೈಟ್ ಕಾರಣದಿಂದ ಎರಡನೇ ದಿನದಾಟ ಅಂತ್ಯಗೊಂಡಿತು.
ಜಮ್ಮು ಮತ್ತು ಕಾಶ್ಮೀರ ತಂಡವು ಎರಡನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 156 ಓವರ್‌ಗಳಲ್ಲಿ 527 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿದೆ. ಎಸ್.ಎಸ್. ಪುದೀರ್ 121 ರನ್‌ಗಳ ಶತಕದಾಟ ಆಡಿದರೆ, ಪರಾಸ್ ಡೋಗ್ರಾ 70 ರನ್‌ಗಳ ಕೊಡುಗೆ ನೀಡಿದ್ದಾರೆ. ಅಬ್ದುಲ್ ಸಮಾದ್ 61, ಕೆ. ವದ್ವಾನ್ 70 ಹಾಗೂ ಹಸನ್ 88 ರನ್‌ಗಳೊಂದಿಗೆ ತಂಡಕ್ಕೆ ಬಲ ನೀಡಿದ್ದಾರೆ. ಕ್ರಮಾನ್ ಇಕ್ಬಾಲ್ 6 ರನ್‌ಗೆ ಔಟ್ ಆಗಿದ್ದಾರೆ.
ಸದ್ಯ ಸಾಹಿಲ್ ಲೋಥ್ರಾ 57 ಹಾಗೂ ಅಬಿಬ್ ಮುಸ್ತಾಕ್ 20 ರನ್‌ಗಳೊಂದಿಗೆ ಕ್ರೀಸ್‌ನಲ್ಲಿ ಇದ್ದು, ತಂಡದ ಮೊತ್ತವನ್ನು ಇನ್ನಷ್ಟು ವಿಸ್ತರಿಸುವ ಯತ್ನದಲ್ಲಿದ್ದಾರೆ.
ಕರ್ನಾಟಕ ಪರ ಪ್ರಸಿದ್ಧ್ ಕೃಷ್ಣ 3 ವಿಕೆಟ್ ಕಬಳಿಸಿದರೆ, ಎಸ್. ಗೋಪಾಲ್ ಮತ್ತು ವಿ. ಪಾಟೀಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.




