ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ 32ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಭರ್ಜರಿ ಪ್ರದರ್ಶನ ನೀಡಿ 40 ರನ್‌ಗಳ ಅಂತರದಲ್ಲಿ ಜಯ ಸಾಧಿಸಿದೆ. ಲಕ್ನೋದಲ್ಲಿನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡದ ನಾಯಕ ರಿಷಭ್ ಪಂತ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅಬ್ಬರದ ಆಟಕ್ಕೆ ಚಾಲನೆ ನೀಡಿದರೂ 22 ರನ್ ಗಳಿಸಿ ಔಟಾದರು. ಅವರ ನಂತರ ಬಂದ ಧ್ರುವ್ ಜುರೆಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ವೈಭವ್ ಸೂರ್ಯವಂಶಿ ಕೂಡ ಹೆಚ್ಚು ಸಮಯ ಕ್ರೀಸ್‌ನಲ್ಲಿ ನಿಲ್ಲದೇ 8 ರನ್ ಗಳಿಸಿ ಪೆವಿಲಿಯನ್ ಸೇರಿದರು. ಪವರ್‌ಪ್ಲೇನಲ್ಲೇ ಮೂರು ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ತಂಡಕ್ಕೆ ಆಸರೆಯಾದವರು ಅನುಭವಿ ಆಟಗಾರ ರವೀಂದ್ರ ಜಡೇಜಾ. ಅವರು ಸಮತೋಲನದ ಆಟ ಪ್ರದರ್ಶಿಸಿ 29 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ಜಡೇಜಾ ಅವರ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 159 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹೆಚ್ಚು ಕೊಡುಗೆ ನೀಡದಿದ್ದರೂ, ಅಂತಿಮ ಓವರ್‌ಗಳಲ್ಲಿ ಕೆಲ ರನ್‌ಗಳನ್ನು ಸೇರ್ಪಡೆ ಮಾಡುವ ಮೂಲಕ ಉತ್ತಮ ಮೊತ್ತವನ್ನು ಕಟ್ಟಿ ಕೊಟ್ಟರು.
160 ರನ್‌ಗಳ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಆಯುಷ್ ಬದೋನಿ ಮೊದಲ ಓವರ್‌ನಲ್ಲೇ ರನ್‌ಔಟ್ ಆಗಿ ಹೊರಬಿದ್ದರೆ, ನಾಯಕ ರಿಷಭ್ ಪಂತ್ ಕೂಡ ಶೂನ್ಯಕ್ಕೆ ಔಟಾದರು. ಐಡೆನ್ ಮಾರ್ಕ್ರಾಮ್ ಕೂಡ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರಿಂದ ತಂಡದ ಸಂಕಷ್ಟಕ್ಕೆ ಸಿಲುಕಿತ್ತು.
ಆರಂಭಿಕ ಆಘಾತದಿಂದ ತಂಡವನ್ನು ಹೊರತೆಗೆಯಲು ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ಜತೆಯಾಗಿ ಉತ್ತಮ ಜೊತೆಯಾಟ ಕಟ್ಟಿದರು. ಪೂರನ್ 22 ರನ್ ಗಳಿಸಿ ಔಟಾದರೆ, ಮಾರ್ಷ್ ಮಾತ್ರ ಹೋರಾಟ ಮುಂದುವರಿಸಿದರು. ಅವರು 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡಕ್ಕೆ ಭರವಸೆ ಮೂಡಿಸಿದರು.
ಆದರೆ ಹಿಮ್ಮತ್ ಸಿಂಗ್ 15 ರನ್ ಗಳಿಸಿ ಔಟಾದರು. ಕೊನೆಯ 5 ಓವರ್‌ಗಳಲ್ಲಿ 61 ರನ್ ಅಗತ್ಯವಿದ್ದ ಸಂದರ್ಭದಲ್ಲಿ ಮಾರ್ಷ್ 55 ರನ್ ಗಳಿಸಿ ಔಟಾದರು. ಅವರ ನಿರ್ಗಮನದಿಂದ ಲಕ್ನೋ ತಂಡದ ಗೆಲುವಿನ ಆಸೆ ಕುಗ್ಗಿತು.
ನಂತರದ ಬ್ಯಾಟ್ಸ್‌ಮನ್‌ಗಳು ಒತ್ತಡ ಎದುರಿಸಲಾರದೆ ವಿಕೆಟ್ ಕಳೆದುಕೊಂಡರು. ರಾಜಸ್ಥಾನ್ ಬೌಲರ್‌ಗಳು ಕಟ್ಟುನಿಟ್ಟಿನ ದಾಳಿ ನಡೆಸಿ ಲಕ್ನೋ ತಂಡವನ್ನು 18 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 40 ರನ್‌ಗಳ ಅಂತರದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ದಾಖಲಿಸಿತು.





