ಬೆಂಗಳೂರು, ಮಾ.28: ಇಂದು (ಮಾರ್ಚ್ 28) ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಉದ್ಘಾಟನಾ ಪಂದ್ಯ ವೈಭವದಿಂದ ಆರಂಭವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾದ ಈ ಪಂದ್ಯದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ 11 ಅಭಿಮಾನಿಗಳ ನೆನಪಿಗೆ ಮೌನಾಚರಣೆ ಮಾಡಲಾಯಿತು.
ಕಾಲ್ತುಳಿತದ ದುರಂತ ನೆನಪು
ಕಳೆದ ವರ್ಷ ನಡೆದ ಟೂರ್ನಿಯಲ್ಲಿ RCB ತಂಡ ಟ್ರೋಫಿ ಗೆದ್ದು ವಿಜಯೋತ್ಸವ ಆಚರಿಸಿಕೊಂಡ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗಿದ್ದ ಕಾಲ್ತುಳಿತದಲ್ಲಿ 11 ಮಂದಿ RCB ಅಭಿಮಾನಿಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಇಂದಿನ ಉದ್ಘಾಟನಾ ಪಂದ್ಯದಲ್ಲಿ ಅಗಲಿದ ಅಭಿಮಾನಿಗಳಿಗೆ ವಿಶೇಷ ಗೌರವ ಸಲ್ಲಿಸಲಾಯಿತು.
ಖಾಲಿ ಸೀಟುಗಳಲ್ಲಿ ಅವರ ನೆನಪು
ಪಂದ್ಯ ಆರಂಭವಾಗುವುದಕ್ಕೂ ಮುನ್ನ ಕ್ರೀಡಾಂಗಣದಲ್ಲಿ 11 ಸೀಟುಗಳನ್ನು ಖಾಲಿ ಬಿಡಲಾಗಿತ್ತು. ಈ ಸೀಟುಗಳಿಗೆ ಬಿಳಿ ಬಣ್ಣ ಬಳಿಯಲಾಗಿದ್ದು, ಹೂವುಗಳಿಂದ ಅಲಂಕರಿಸಲಾಗಿತ್ತು. ಅಗಲಿದ ಪ್ರತಿಯೊಬ್ಬ ಅಭಿಮಾನಿಯ ಸ್ಮರಣಾರ್ಥವಾಗಿ ಈ ಸೀಟುಗಳನ್ನು ಮೀಸಲಾಗಿರಿಸಲಾಗಿತ್ತು.
ಆಟಗಾರರಿಂದ ಭಾವುಕ ಗೌರವ
ಎರಡೂ ತಂಡಗಳ ಆಟಗಾರರು ಮೈದಾನ ಪ್ರವೇಶಿಸುವ ಮುನ್ನ ಬೌಂಡರಿ ಲೈನ್ ಬಳಿ ಸಾಲಾಗಿ ನಿಂತು ತಲೆಬಾಗಿ ಒಂದು ನಿಮಿಷದ ಕಾಲ ಮೌನಾಚರಣೆ ಮಾಡಿದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೂ ಸಹ ಮೌನವಾಗಿ ಸಂತಾಪ ಸೂಚಿಸಿದರು. RCB ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕಣಕ್ಕಿಳಿದು ಮೃತರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು. SRH ತಂಡದ ಆಟಗಾರರೂ ಸಹ ಈ ಗೌರವಾರ್ಪಣೆಯಲ್ಲಿ ಭಾಗಿಯಾಗಿದ್ದರು.
ರಜತ್ ಪಾಟೀದಾರ್ ನೇತೃತ್ವದ RCB:
ಈ ಪಂದ್ಯದಲ್ಲಿ ಟಾಸ್ ಗೆದ್ದ RCB ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡು SRH ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಕಳೆದ ಬಾರಿಯ ಚಾಂಪಿಯನ್ ತಂಡವಾಗಿ RCB ಈ ಬಾರಿಯೂ ತನ್ನ ಪ್ರತಿಭೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ.
ಅಭಿಮಾನಿಗಳ ಭಾವುಕ ಪ್ರತಿಕ್ರಿಯೆ
ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ಈ ಗೌರವಾರ್ಪಣೆಯನ್ನು ಕಣ್ತುಂಬಿಕೊಂಡರು. ಅನೇಕರು ಕೈಜೋಡಿಸಿ ಪ್ರಾರ್ಥನೆ ಸಲ್ಲಿಸಿದರು.





