ಬೆಂಗಳೂರು: ಐಪಿಎಲ್ 2026ರ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ‘ಸೌತ್ ಡರ್ಬಿ’ ಪಂದ್ಯವು ಕೇವಲ ಕ್ರಿಕೆಟ್ ಕಾಳಗವಾಗಿರದೆ, ಇದೀಗ ದೊಡ್ಡ ವಿವಾದಕ್ಕೂ ಕಾರಣವಾಗಿದೆ. ಏಪ್ರಿಲ್ 5ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ RCB ಭರ್ಜರಿ ಪ್ರದರ್ಶನ ನೀಡಿ 250 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ CSK ತಂಡವು 207 ರನ್‌ಗಳಿಗೆ ಸೀಮಿತವಾಗಿ 43 ರನ್‌ಗಳಿಂದ ಸೋಲನುಭವಿಸಿತು.
ಯಾವುದು ವಿವಾದದ ಮೂಲ?
ಪಂದ್ಯದ ವೇಳೆ CSK ಆಟಗಾರರು ಔಟಾದಾಗ ಮತ್ತು ಪ್ರೇಕ್ಷಕರ ಮನರಂಜನೆಗೆಂದು ಡಿಜೆ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾನೆ. ಈ ಹಾಡು ಸಾಮಾನ್ಯವಾಗಿ ತಮಿಳು ಸಮುದಾಯವನ್ನು ಅಣಕಿಸಲು ಬಳಸುವ ಮೀಮ್ ಸಂಗೀತವಾಗಿದೆ. ಇದು CSK ತಂಡದ ಆಟಗಾರರು ಮತ್ತು ಮ್ಯಾನೇಜ್ಮೆಂಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.
CSK ದೂರಿನ ಪ್ರಮುಖ ಅಂಶಗಳು
CSK ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಅವರು BCCI ಗೆ ಸಲ್ಲಿಸಿದ ಅಧಿಕೃತ ದೂರಿನಲ್ಲಿ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
-
ಗೌರವಕ್ಕೆ ಧಕ್ಕೆ: “ದೋಸೆ-ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು CSK ಆಟಗಾರರು ಮತ್ತು ಅಭಿಮಾನಿಗಳ ಭಾವನೆಗಳನ್ನು ನೋಯಿಸಿದೆ. ಇದು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿದೆ.
-
ಅವಹೇಳನಕಾರಿ ಕಾಮೆಂಟ್: ಕೆಲವು ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಡಿಜೆ ಮೈಕ್ ಮೂಲಕ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಲಾಗಿದೆ.
-
ಅವಮಾನ: “ಡಿಜೆಗಳು ತವರು ತಂಡವನ್ನು ಬೆಂಬಲಿಸುವುದು ಸ್ವಾಗತಾರ್ಹ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ಸರಿಯಲ್ಲ” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.
ಹಿಂದಿನ ಘರ್ಷಣೆಗೂ ಸಂಬಂಧವೇ?
ಈ ವಿವಾದ ಹೊಸದೇನಲ್ಲ. 2025ರ ಐಪಿಎಲ್‌ನಲ್ಲಿ RCB ಆಟಗಾರ ಜಿತೇಶ್ ಶರ್ಮಾ ಇದೇ ಹಾಡನ್ನು ಹಾಡಿದ ವಿಡಿಯೋ ವೈರಲ್ ಆಗಿತ್ತು. ಆಗ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಅಲ್ಲಿನ ಡಿಜೆ ಕೂಡ ತಿರುಗೇಟು ನೀಡಲು ಯತ್ನಿಸಿದ್ದರು. ಆದರೆ CSK ಮ್ಯಾನೇಜ್ಮೆಂಟ್ ಆಗ ಮಧ್ಯಪ್ರವೇಶಿಸಿ ತಡೆದಿತ್ತು. ಈಗ ಬೆಂಗಳೂರಿನಲ್ಲಿ ಅದೇ ಪ್ರಕರಣ ಮರುಕಳಿಸಿರುವುದು ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.
ಬಿಸಿಸಿಐ ಕ್ರಮವೇನು?
ಐಪಿಎಲ್ ಆಡಳಿತ ಮಂಡಳಿಯು CSK ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆ ನುಸುಳದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ. ಬಿಸಿಸಿಐ ಕೂಡಲೇ RCB ಮ್ಯಾನೇಜ್ಮೆಂಟ್‌ನಿಂದ ವಿವರಣೆ ಕೇಳುವ ನಿರೀಕ್ಷೆಯಿದೆ.
ಅಭಿಮಾನಿಗಳ ಪ್ರತಿಕ್ರಿಯೆ
ಕ್ರೀಡಾ ಪ್ರಿಯರು ಈ ವಿವಾದದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ‘ಇದು ಕೇವಲ ಮನರಂಜನೆ, ಅತಿಯಾಗಿ ಪ್ರತಿಕ್ರಿಯಿಸಬೇಡಿ’ ಎಂದರೆ, ಇನ್ನು ಕೆಲವರು ‘ಪ್ರಾದೇಶಿಕ ಅಣಕು ಕ್ರೀಡಾ ಮನೋಭಾವಕ್ಕೆ ಸಲ್ಲದು’ ಎಂದು ವಾದಿಸುತ್ತಿದ್ದಾರೆ.





