ಐಪಿಎಲ್ 2026ರ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಭಾರೀ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ 19 ಓವರ್‌ಗಳಲ್ಲಿ ಪಂದ್ಯ ಮುಗಿಸಿ ಭರ್ಜರಿ ಜಯ ದಾಖಲಿಸಿತು. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಸತತ ನಾಲ್ಕನೇ ಸೋಲಿಗೆ ತುತ್ತಾಗಿ ಟೂರ್ನಿಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿತು. ಆರಂಭಿಕರಾದ ಪ್ರಭ್ಸಿಮ್ರಾನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ತಂಡಕ್ಕೆ ವೇಗದ ಆರಂಭ ನೀಡಿದರು. ಇಬ್ಬರೂ ಪವರ್‌ಪ್ಲೇ ಅವಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ದೆಹಲಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಈ ಜೋಡಿ ಮೊದಲ ವಿಕೆಟ್‌ಗೆ 78 ರನ್‌ಗಳ ಜೊತೆಯಾಟ ನೀಡಿತು. ಆದರೆ 18 ರನ್ ಗಳಿಸಿದ್ದ ಪ್ರಭ್ಸಿಮ್ರಾನ್ ಸಿಂಗ್ ಔಟಾದ ನಂತರ ಈ ಜೋಡಿ ಬೇರೆಯಾದ್ರು.
ಇನ್ನೊಂದು ತುದಿಯಲ್ಲಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿದ ಪ್ರಿಯಾಂಶ್ ಆರ್ಯ ಕೇವಲ 33 ಎಸೆತಗಳಲ್ಲಿ 56 ರನ್ ಗಳಿಸಿ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳು ಸೇರಿದ್ದವು. ಬಳಿಕ ಕೂಪರ್ ಕೂಡ ವೇಗವಾಗಿ ರನ್ ಕಲೆಹಾಕಿ 27 ಎಸೆತಗಳಲ್ಲಿ 38 ರನ್ ಗಳಿಸಿದರು.
ನಾಯಕ ಶ್ರೇಯಸ್ ಅಯ್ಯರ್ ಉತ್ತಮ ಆಟವಾಡಿ ಕೊನೆಯವರೆಗೂ ಅಜೇಯರಾಗಿದ್ದರು. ಅವರು 36 ಎಸೆತಗಳಲ್ಲಿ 59 ರನ್ ಗಳಿಸಿ ತಂಡದ ಮೊತ್ತವನ್ನು 210ರ ಗಡಿಗೆ ತಲುಪಿಸಿದರು. ಶ್ರೇಯಸ್ ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳು ಗಮನ ಸೆಳೆದವು. ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಹಾಗೂ ಮಾಧವ್ ತಿವಾರಿ ತಲಾ ಎರಡು ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.
211 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಅಭಿಷೇಕ್ ಪೂರೆಲ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಕೆ.ಎಲ್. ರಾಹುಲ್ ಕೂಡ 9 ರನ್‌ಗೆ ಔಟಾದರು. ಸಾಹಿಲ್ ಮತ್ತು ಸ್ಟಬ್ಸ್ ವಿಕೆಟ್ ಕಳೆದುಕೊಂಡ ಡೆಲ್ಲಿ ಸಂಕಷ್ಟಕ್ಕೆ ಸಿಲುಕಿದಂತೆ ಕಂಡಿತು.
ಆದರೆ ನಾಯಕ ಅಕ್ಷರ್ ಪಟೇಲ್ ತಂಡದ ಪರ ಹೋರಾಟ ನಡೆಸಿದರು. ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್‌ನಲ್ಲಿ ಮಿಂಚಿದ ಅಕ್ಷರ್ 56 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಅವರ ಶಾಂತ ಹಾಗೂ ಜವಾಬ್ದಾರಿಯುತ ಆಟ ಡೆಲ್ಲಿ ತಂಡಕ್ಕೆ ಮತ್ತೆ ಭರವಸೆ ನೀಡಿತು.
ಅಕ್ಷರ್‌ಗೆ ಮತ್ತೊಂದು ತುದಿಯಲ್ಲಿ ಡೇವಿಡ್ ಮಿಲ್ಲರ್ ಉತ್ತಮ ಬೆಂಬಲ ನೀಡಿದರು. ಮಿಲ್ಲರ್ 51 ರನ್ ಗಳಿಸಿ ಪಂದ್ಯವನ್ನು ಡೆಲ್ಲಿ ಪರ ತಿರುಗಿಸಿದರು. ಈ ಜೋಡಿ ವೇಗವಾಗಿ ರನ್ ಕಲೆಹಾಕಿ ಪಂಜಾಬ್ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚಿಸಿತು. ಆದರೆ ಇಬ್ಬರೂ ಗೆಲುವಿನ ಕ್ಷಣಕ್ಕೂ ಮುನ್ನ ಔಟಾದ ಕಾರಣ ಪಂದ್ಯ ಮತ್ತಷ್ಟು ರೋಚಕ ಹಂತ ತಲುಪಿತು.
ಕೊನೆಯಲ್ಲಿ ಆಶುತೋಷ್ ಶರ್ಮಾ ಮತ್ತು ಮಾಧವ್ ತಿವಾರಿ ಸಮಾಧಾನಕರ ಆಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಶುತೋಷ್ 28 ರನ್ ಹಾಗೂ ಮಾಧವ್ ತಿವಾರಿ 18 ರನ್ ಗಳಿಸಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಆಕಿಬ್ ನಬಿ ಕೂಡ ಅಜೇಯ 10 ರನ್ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.





