ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಮ್ಮ ಮಾಜಿ ತಂಡದ ವಿರುದ್ಧ ಸೇಡಿನ ಕದನಕ್ಕಿಳಿಯಲಿದ್ದಾರೆ. ಉಭಯ ತಂಡಗಳು ಗೆಲುವಿನ ಲಯದಲ್ಲಿದ್ದು, ತಲಾ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನಕ್ಕಾಗಿ ಹೋರಾಡುತ್ತಿವೆ. ಈ ಪಂದ್ಯ ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕಳೆದ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಮಾಲಿಕ ಸಂಜೀವ್ ಗೋಯೆಂಕಾರಿಂದ ಮೈದಾನದಲ್ಲಿ ಅವಮಾನಕ್ಕೊಳಗಾಗಿದ್ದ ಕೆ.ಎಲ್.ರಾಹುಲ್, ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. 3 ವರ್ಷ ಲಖನೌ ತಂಡದ ನಾಯಕರಾಗಿದ್ದ ರಾಹುಲ್, ಮೊದಲ ಬಾರಿಗೆ ತಮ್ಮ ಮಾಜಿ ತಂಡದ ವಿರುದ್ಧ ಆಡಲು ಕಾತರರಾಗಿದ್ದಾರೆ. ಈ ಐಪಿಎಲ್‌ನಲ್ಲಿ ಮಾಜಿ ತಂಡದ ವಿರುದ್ಧ ಅಬ್ಬರಿಸುವ ಟ್ರೆಂಡ್ ಚಾಲ್ತಿಯಲ್ಲಿದ್ದು, ರಾಹುಲ್ ಈಗಾಗಲೇ ಆರ್‌ಸಿಬಿ ವಿರುದ್ಧ ಚಿನ್ನಸ್ವಾಮಿಯಲ್ಲಿ 92 ರನ್‌ಗಳ ಜೊತೆ ಗಮನ ಸೆಳೆದಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಈ ವರ್ಷ ಲಖನೌ ವಿರುದ್ಧದ ಮೊದಲ ಪಂದ್ಯವನ್ನು ತಪ್ಪಿಸಿದ್ದ ರಾಹುಲ್, ಈ ಬಾರಿ ಆರ್ಭಟಿಸಲು ಸಜ್ಜಾಗಿದ್ದಾರೆ.
ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿದ್ದು, ಗೆಲುವಿನ ಲಯ ಕಾಯ್ದುಕೊಂಡು ಪ್ಲೇಆಫ್‌ಗೆ ದಾಪುಗಾಲಿಡಲು ಉತ್ಸುಕವಾಗಿವೆ. ಲಖನೌ ತಂಡದ ಏಯ್ಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಮತ್ತು ರಿಷಭ್ ಪಂತ್ ಏಕಾಂಗಿಯಾಗಿ ಪಂದ್ಯದ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಡೆಲ್ಲಿ ತಂಡದಲ್ಲಿ ಕರುಣ್ ನಾಯರ್, ಅಭಿಷೇಕ್ ಪೊರೆಲ್, ಮತ್ತು ಫಾಫ್ ಡು ಪ್ಲೆಸಿಸ್ ಇಂಪ್ಯಾಕ್ಟ್ ಆಟಗಾರರಾಗಿ ಕಾಣಿಸಿಕೊಳ್ಳಬಹುದು. ಗಾಯದಿಂದ ಚೇತರಿಸಿಕೊಂಡಿರುವ ಫಾಫ್ ಡು ಪ್ಲೆಸಿಸ್ ಮತ್ತು ಲಖನೌನ ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಎರಡೂ ತಂಡಗಳ ರಣತಂತ್ರ ಕುತೂಹಲ ಕೆರೆಯುತ್ತಿದೆ.
ಹಿಂದಿನ ಮುಖಾಮುಖಿಯಲ್ಲಿ ಲಖನೌ ಗೆಲುವಿನ ಹೊಸ್ತಿಲಲ್ಲಿತ್ತು, ಆದರೆ ಡೆಲ್ಲಿಯ ಅಶುತೋಷ್ ಶರ್ಮಾ ವಿಸ್ಫೋಟಕ ಬ್ಯಾಟಿಂಗ್‌ನಿಂದ ಗೆಲುವನ್ನು ಕಸಿದುಕೊಂಡಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳಲು ರಿಷಭ್ ಪಂತ್ ನಾಯಕತ್ವದ ಲಖನೌ ತಂಡ ಕಾತರವಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲಿ 4 ಪಂದ್ಯಗಳನ್ನು ಗೆದ್ದರೂ, ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿತ್ತು. ಆದರೆ, ರಾಜಸ್ಥಾನ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದು ಜಯದ ಹಳಿಗೆ ಮರಳಿತು. ಇಂದಿನ ಪಂದ್ಯ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಲಿದೆ.
ತಂಡಗಳ ಆಟಗಾರರ ಪಟ್ಟಿ:
ಲಖನೌ ಸೂಪರ್ ಜೈಂಟ್ಸ್: ಏಯ್ಡನ್ ಮಾರ್ಕ್ರಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್, ಮಯಾಂಕ್ ಯಾದವ್, ದಿಗ್ವೀಶ್ ಸಿಂಗ್ ರಾಠಿ, ಆವೇಶ್ ಖಾನ್, ಆಯುಷ್ ಬದೋನಿ.
ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಕೇಶ್ ಕುಮಾರ್, ಡೊನಾವನ್ ಫೆರೇರಾ.





