ಲಖನೌ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಲಖನೌನ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ 4ನೇ ಟಿ20 ಪಂದ್ಯವು ಅತೀವ ಮಂಜಿದ್ದ ಕಾರಣದಿಂದ ರದ್ದಾಗಿದೆ. ದಟ್ಟವಾದ ಮಂಜು ಮುಸುಕಿದ ವಾತಾವರಣದಿಂದಾಗಿ ಮೈದಾನದಲ್ಲಿ ದೃಷ್ಟಿಗೋಚರತೆ (ಕಾಣುವುದು) ತೀರಾ ಕುಸಿದ ಹಿನ್ನೆಲೆಯಲ್ಲಿ ಒಂದು ಎಸೆತವನ್ನೂ ಕಾಣದೆ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಇಂದು ಸಂಜೆ ಪಂದ್ಯ ಆರಂಭವಾಗಬೇಕಿತ್ತು, ಆದರೆ ಟಾಸ್ ಸಮಯಕ್ಕೂ ಮುನ್ನವೇ ಮೈದಾನ ಪೂರ್ತಿ ಮಂಜು ಆವರಿಸಿತ್ತು. ಅಂಪೈರ್‌ಗಳು, ಮ್ಯಾಚ್ ರೆಫ್ರಿ ಮತ್ತು ಎರಡೂ ತಂಡಗಳ ಆಟಗಾರರು ಸುಮಾರು ಮೂರು ಗಂಟೆಗಳ ಕಾಲ ಪರಿಸ್ಥಿತಿ ಸುಧಾರಿಸಬಹುದು ಎಂದು ಕಾದು ಕುಳಿತರು. ಆದರೆ ಸಮಯ ಕಳೆದಂತೆ ಮಂಜು ಮತ್ತಷ್ಟು ದಟ್ಟವಾಯಿತು. 100 ಮೀಟರ್ ದೂರದಲ್ಲಿ ನಿಂತ ಆಟಗಾರರೂ ಸರಿಯಾಗಿ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕ್ರೀಡಾಂಗಣದ ವಿದ್ಯುತ್ ದೀಪಗಳೂ ಸಹ ಮಂಜಿನಿಂದ ಮಬ್ಬಾಯಿತು ಈ ಕಾರಣ, ಆಟಗಾರರ ಸುರಕ್ಷತೆಯನ್ನು ಪರಿಗಣಿಸಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಐದು ಪಂದ್ಯಗಳ ಈ ಸರಣಿಯಲ್ಲಿ ಸದ್ಯ ಟೀಂ ಇಂಡಿಯಾ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 4ನೇ ಪಂದ್ಯ ರದ್ದಾಗಿರುವುದರಿಂದ ಸೌತ್ ಆಫ್ರಿಕಾ ತಂಡಕ್ಕೆ ಸರಣಿ ಗೆಲ್ಲುವ ಅವಕಾಶ ಕೈತಪ್ಪಿದೆ. ಒಂದು ವೇಳೆ ಕೊನೆಯ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆದ್ದರೆ ಸರಣಿ 2-2 ರಿಂದ ಸಮಬಲಗೊಳ್ಳಲಿದೆ. ಆದರೆ ಭಾರತ ಮುಂದಿನ ಪಂದ್ಯ ಗೆದ್ದರೆ 3-1 ಅಂತರದಲ್ಲಿ ಟ್ರೋಫಿ ಗೆಲ್ಲಿಲಿದೆ.
ಈವರೆಗಿನ ಸರಣಿಯ ಹಾದಿ:
-
1ನೇ ಟಿ20: ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿ 101 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.
-
2ನೇ ಟಿ20: ದಕ್ಷಿಣ ಆಫ್ರಿಕಾ ತಿರುಗಿಬಿದ್ದು 213 ರನ್‌ಗಳ ಬೃಹತ್ ಮೊತ್ತ ಪೇರಿಸಿ, ಭಾರತವನ್ನು 51 ರನ್‌ಗಳಿಂದ ಸೋಲಿಸಿತ್ತು.
-
3ನೇ ಟಿ20: ಬೌಲರ್‌ಗಳ ಸಂಘಟಿತ ಹೋರಾಟದಿಂದ ಆಫ್ರಿಕನ್ನರನ್ನು 117ಕ್ಕೆ ಕಟ್ಟಿಹಾಕಿದ ಭಾರತ, 15.5 ಓವರ್‌ಗಳಲ್ಲೇ ಗುರಿ ತಲುಪಿ 2-1 ಮುನ್ನಡೆ ಸಾಧಿಸಿತ್ತು.
ಲಖನೌನಲ್ಲಿ ಪಂದ್ಯ ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಆಗಮಿಸಿದ್ದರು. ಆದರೆ ಮಂಜು ಕರಗದ ಕಾರಣ ಕೇವಲ ಆಟಗಾರರನ್ನು ನೋಡಿ ಅಭಿಮಾನಿಗಳು ಮನೆಗೆ ಮರಳಬೇಕಾಯಿತು. ಈಗ ಎಲ್ಲರ ಕಣ್ಣು ಐದನೇ ಹಾಗೂ ಅಂತಿಮ ಪಂದ್ಯದ ಮೇಲಿದೆ. ಭಾರತಕ್ಕೆ ಸರಣಿ ಗೆಲ್ಲುವ ಸುವರ್ಣ ಅವಕಾಶವಿದ್ದರೆ, ಸೌತ್ ಆಫ್ರಿಕಾ ಸರಣಿಯನ್ನು ಡ್ರಾ ಮಾಡಿಕೊಳ್ಳುವ ಒತ್ತಡದಲ್ಲಿದೆ.





