ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶನಿವಾರ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಈ ಬಾರಿಯ ತಂಡದ ಆಯ್ಕೆಯಲ್ಲಿ ಹಲವು ಬದಲಾವಣೆಗಳನ್ನ ಮಾಡಲಾಗಿದ್ದು, ಯುವ ಪ್ರತಿಭೆಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಮುಂಬರುವ ಟಿ20 ವಿಶ್ವಕಪ್ ಟೂರ್ನಿಯು 2026ರ ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ಭಾರತ ಮತ್ತು ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಈ ಮೆಗಾ ಟೂರ್ನಿಯನ್ನು ಗೆಲ್ಲಲು ಬಿಸಿಸಿಐ ಈಗಿನಿಂದಲೇ ಮಾಸ್ಟರ್ ಪ್ಲಾನ್ ರೂಪಿಸಿದೆ. ತಂಡದ ಘೋಷಣೆಗೂ ಮುನ್ನ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಸೈಕಿಯಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸುದೀರ್ಘ ಚರ್ಚೆ ನಡಸಿದ್ದಾರೆ.
ಈ ಆಯ್ಕೆಯ ಪ್ರಮುಖ ಹೈಲೈಟ್ ಎಂದರೆ ಸ್ಟಾರ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರ ಅನುಪಸ್ಥಿತಿ. ಕಳೆದ ಏಷ್ಯಾ ಕಪ್‌ನಿಂದಲೂ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದ ಗಿಲ್ ಅವರನ್ನು ಆಯ್ಕೆಗಾರರು ಕೈಬಿಟ್ಟಿದ್ದಾರೆ. ಇನ್ನು ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ದೊಡ್ಡ ಜವಾಬ್ದಾರಿ ನೀಡಲಾಗಿದ್ದು, ತಂಡದ ಉಪನಾಯಕರಾಗಿ ಅಕ್ಷರ್ ಪಟೇಲ್‌ರನ್ನು ಆಯ್ಕೆ ಮಾಡಲಾಗಿದೆ.
ದೀರ್ಘಕಾಲದ ವಿರಾಮದ ನಂತರ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗೆ ಮುಗಿದ ಸೈಯದ್ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಅಬ್ಬರಿಸಿದ್ದ ಕಿಶನ್, 10 ಇನಿಂಗ್ಸ್‌ಗಳಿಂದ 517 ರನ್ ಗಳಿಸಿ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಈ ಪಂದ್ಯಲ್ಲಿ ಅವರು ನೀಡಿದ್ದ ಅಮೋಘ ಪ್ರದರ್ಶನದಿಂದ ಇಂದು ಅವರು ವಿಶ್ವಕಪ್ ಟಿಕೆಟ್ ದೊರಕಿದೆ. ಸಂಜು ಸ್ಯಾಮ್ಸನ್ ಮೊದಲ ವಿಕೆಟ್ ಕೀಪರ್ ಆಗಿದ್ದರೆ, ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡಿದ್ದ ಜಿತೇಶ್ ಶರ್ಮಾ ಅವರಿಗೆ ನಿರಾಸೆಯಾಗಿದ್ದು, ಅವರ ಬದಲಿಗೆ ಮ್ಯಾಚ್ ಫಿನಿಷರ್ ರಿಂಕು ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಕಳೆದ ಕೆಲವು ಪಂದ್ಯಗಳಿಂದ ಹೊರಗಿದ್ದ ರಿಂಕು, ಈಗ ವಿಶ್ವಕಪ್‌ನಲ್ಲಿ ಫಿನಿಶರ್ ಆಗಿ ಆಟ ಆಡಲಿದ್ದಾರೆ.
ವಿಶ್ವಕಪ್‌ಗೂ ಮುನ್ನ ಜನವರಿ 21 ರಿಂದ 31ರವರೆಗೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೂ ಇದೇ ತಂಡವನ್ನು ಪ್ರಕಟಿಸಲಾಗಿದೆ. ಕಿವೀಸ್ ಎದುರಿನ ಈ ಸರಣಿಯು ಭಾರತ ತಂಡಕ್ಕೆ ವಿಶ್ವಕಪ್ ಸಿದ್ಧತೆಗೆ ಉತ್ತಮ ವೇದಿಕೆಯಾಗಲಿದೆ.
2026ರ ಟಿ20 ವಿಶ್ವಕಪ್‌ಗೆ ಭಾರತದ 15 ಸದಸ್ಯರ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ (ಯುವ ಓಪನರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ (ಉಪ ನಾಯಕ), ರಿಂಕು ಸಿಂಗ್ (ಫಿನಿಶರ್), ಜಸ್‌ಪ್ರೀತ್ ಬುಮ್ರಾ (ವೇಗದ ಬೌಲಿಂಗ್ ನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್ (ವಿಕೆಟ್ ಕೀಪರ್)





