ಕೊಲಂಬೊ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ iಂದು ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ತನ್ನ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿದ್ದು, ಅಮನ್‌ಜೋತ್ ಕೌರ್ ಬದಲು ರೇಣುಕಾ ಸಿಂಗ್ ಠಾಕೂರ್ ಅವರಿಗೆ ಅವಕಾಶ ನೀಡಲಾಗಿದೆ.
ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 27 ಪಂದ್ಯಗಳು ನಡೆದಿವೆ. ಅದರಲ್ಲಿ ಭಾರತ 24-3ರ ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಟಿ20 ಮಾದರಿಯಲ್ಲಿ ಪಾಕಿಸ್ತಾನ ಮೂರು ಪಂದ್ಯಗಳನ್ನು ಗೆದ್ದಿದ್ದರೂ, ಪಾಕಿಸ್ತಾನ ಇದುವರೆಗೂ ಏಕದಿನದಲ್ಲಿ ಭಾರತದ ವಿರುದ್ಧ ಗೆಲುವಿನ ಖಾತೆ ತೆರೆದಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ತಂಡ 12ನೇ ನೇರ ಗೆಲುವಿನ ಹುಡುಕಾಟದಲ್ಲಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಇದು ಚಾರಿತ್ರಿಕ ಗೆಲುವಿನ ಅವಕಾಶವಾಗಿದೆ.
ಪಂದ್ಯದ ಮೊದಲು ಎರಡೂ ತಂಡಗಳ ನಡುವೆ ಹ್ಯಾಂಡ್‌ಶೇಕ್ ನಡೆಯದಿರುವುದು ಗಮನ ಸೆಳೆದಿದೆ. ಇತ್ತೀಚಿನ ಏಷ್ಯಾ ಕಪ್ ಪುರುಷರ ಪಂದ್ಯದಲ್ಲಿ ಕಂಡಂತೆಯೇ, ಭಾರತ-ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಎರಡೂ ತಂಡಗಳ ನಾಯಕರು “ನಾವು ಕೇವಲ ಕ್ರಿಕೆಟ್ ಮೇಲೆ ಗಮನ ಹರಿಸುತ್ತೇವೆ” ಎಂದು ಹೇಳಿದ್ದಾರೆ. ಐಸಿಸಿ ನಿಯಮಗಳ ಪ್ರಕಾರ ಟಾಸ್ ಸಮಯದಲ್ಲಿ ನಾಯಕರು ಕೈಕುಲುಕುವುದು ಸಾಂಪ್ರದಾಯಿಕವಾಗಿದ್ದರೂ, ಈ ಬಾರಿ ಅದು ನಡೆಯದಿರುವುದು ಚರ್ಚೆಗೆ ಗ್ರಾಸವಾಗಿದೆ.
ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 59 ರನ್‌ಗಳ ಗೆಲುವು ಸಾಧಿಸಿ ಉತ್ತಮ ಆರಂಭ ಪಡೆದಿದೆ. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿರಲಿಲ್ಲ. ಆರಂಭಿಕ ಜೋಡಿ ಉತ್ತಮ ಆರಂಭ ನೀಡದಿರುವುದು ತಂಡಕ್ಕೆ ಕಳವಳಕಾರಿಯಾಗಿತ್ತು. ಆದರೆ ದೀಪ್ತಿ ಶರ್ಮಾ ಅವರ ಆಲ್‌ರೌಂಡ್ ಪ್ರದರ್ಶನ (50 ರನ್ ಮತ್ತು 3 ವಿಕೆಟ್) ತಂಡಕ್ಕೆ ಆಸರೆಯಾಗಿದೆ. ಇಂದು ಪಾಕಿಸ್ತಾನ ವಿರುದ್ಧ ಹರ್ಮನ್‌ಪ್ರೀತ್ ಮತ್ತು ಸ್ಮೃತಿ ಉತ್ತಮ ಜತೆಯಾಟ ನಡೆಸಬೇಕಿದೆ. ಪ್ರತೀಕಾ ರಾವಲ್ ಅವರು ಆರಂಭಿಕರಾಗಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಭಾರತದ ಆಡುವ ಬಳಗ: ಪ್ರತೀಕಾ ರಾವಲ್, ಸ್ಮೃತಿ ಮಂದಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್, ಶ್ರೀ ಚರಣಿ.
ಪಾಕಿಸ್ತಾನದ ಆಡುವ ಬಳಗ: ಮುನೀಬಾ ಅಲಿ, ಸದಾಫ್ ಶಮಾಸ್, ಸಿದ್ರಾ ಅಮೀನ್, ರಮೀನ್ ಶಮೀಮ್, ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೆಟ್ ಕೀಪರ್), ಫಾತಿಮಾ ಸನಾ (ನಾಯಕಿ), ನತಾಲಿಯಾ ಪರ್ವೈಜ್, ಡಯಾನಾ ಬೇಗ್, ನಶ್ರಾ ಸಂಧು, ಸಾದಿಯಾ ಇಕ್ಬಾಲ್.