ನವದೆಹಲಿ: ಏಷ್ಯಾ ಕಪ್ 2025ರ ಟಿ20 ಟೂರ್ನಿಯ ಮಹತ್ವದ ಭಾರತ-ಪಾಕಿಸ್ತಾನ (IND vs PAK) ಪಂದ್ಯಕ್ಕೆ ಯುಎಇಯ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಇಂದು ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಈ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಆದರೆ, ಪಂದ್ಯಕ್ಕೂ ಮುನ್ನನೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧದ ಕೂಗು ಕೇಳಿಬಂದಿದೆ. ಕಾಶ್ಮೀರದ ಪಹಲ್ಗಾಂನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಛಾಯೆಯಲ್ಲಿ, ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಬಾರದು ಎಂಬ ಒತ್ತಾಯ ಜೋರಾಗಿದೆ.
ಪಹಲ್ಗಾಂ ದಾಳಿಯಲ್ಲಿ ಕಾನ್ಪುರದ ಉದ್ಯಮಿ ಶುಭಂ ದ್ವಿವೇದಿ ಸಾವನ್ನಪ್ಪಿದ್ದರು. ಅವರ ಪತ್ನಿ ಈ ಪಂದ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪಾಕಿಸ್ತಾನದ ವಿರುದ್ಧ ಭಾರತ ತಂಡ ಕ್ರಿಕೆಟ್ ಆಡುವುದು ದಾಳಿಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಮಾಡುವ ಅವಮಾನ” ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ. ಭಾರತ-ಪಾಕ್ ಪಂದ್ಯ ಆಡುವುದು ಸರಿಯಲ್ಲ ಎಂದು ಅವರು ವಾದಿಸಿದ್ದಾರೆ. ಈ ಭಾವನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, #BoycottIndvsPak ಎಂಬ ಹ್ಯಾಷ್‌ಟ್ಯಾಗ್ ಜನಪ್ರಿಯವಾಗಿದೆ.
ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಅಭಿಯಾನ ಆರಂಭವಾಗಿದ್ದು, ಜನರು ಪಂದ್ಯವನ್ನು ವೀಕ್ಷಿಸದಂತೆ ಕರೆ ನೀಡುತ್ತಿದ್ದಾರೆ. ಕೆಲವು ರಾಜಕೀಯ ಪಕ್ಷಗಳು ಮತ್ತು ಗಣ್ಯರು ಕೂಡಾ ಈ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಒತ್ತಾಯಿಸಿದ್ದಾರೆ. ಈ ನಡುವೆ, ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಶನಿವಾರ ಸಾಮಾಜಿಕ ತಾಣದಲ್ಲಿ ಭಾರತದ ಧ್ವಜದ ಚಿಹ್ನೆಯೊಂದಿಗೆ ಪಂದ್ಯದ ಬಗ್ಗೆ ಪೋಸ್ಟ್ ಮಾಡಿತ್ತು. ಇದು ಚರ್ಚೆಗೆ ಕಾರಣವಾಯಿತು.
ಈ ಎಲ್ಲ ವಿರೋಧಗಳ ನಡುವೆಯೂ, ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಲು ಸಿದ್ಧವಾಗಿದೆ. ಕ್ರಿಕೆಟ್ ಒಕ್ಕೂಟದ ಮೂಲಗಳ ಪ್ರಕಾರ, ಈ ಪಂದ್ಯವು ರಾಜಕೀಯ ಒತ್ತಡಗಳಿಗೆ ಮಣಿಯದೆ ನಡೆಯಲಿದೆ. ಆದರೆ, ಸಾಮಾಜಿಕ ತಾಣಗಳಲ್ಲಿ ಜನರ ಆಕ್ರೋಶ ಕಡಿಮೆಯಾಗಿಲ್ಲ. ಕೆಲವರು ಈ ಪಂದ್ಯವನ್ನು ರಾಷ್ಟ್ರೀಯ ಗೌರವದ ಪ್ರಶ್ನೆಯಾಗಿ ಪರಿಗಣಿಸಿದ್ದಾರೆ. “ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುವ ದೇಶದ ವಿರುದ್ಧ ಆಡುವುದು ತಪ್ಪು ಸಂದೇಶವನ್ನು ಕೊಡುತ್ತದೆ” ಎಂದು ಕೆಲವು ಟೀಕಾಕಾರರು ಆಕ್ಷೇಪಿಸಿದ್ದಾರೆ.





