ಗುಹವಾಟಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ಸಜ್ಜಾಗಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿರುವ ಸೂರ್ಯಕುಮಾರ್ ಪಡೆಯು, ಇಂದು (ಜ.25) ನಡೆಯಲಿರುವ ಪಂದ್ಯದಲ್ಲಿ ಜಯಭೇರಿ ಬಾರಿಸಿ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಳ್ಳುವ ತವಕದಲ್ಲಿದೆ.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಒಂದು ಪಂದ್ಯದಲ್ಲಿ ವೈಫಲ್ಯ ಅನುಭವಿಸಿದರೂ, ತಂಡಕ್ಕೆ ಆಸರೆಯಾಗಲು ಇಶಾನ್ ಕಿಶನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸಿದ್ಧರಿದ್ದಾರೆ ಎಂಬುದು ರಾಯಪುರ ಪಂದ್ಯದಲ್ಲಿ ಸಾಬೀತಾಗಿದೆ. ದೀರ್ಘಕಾಲದ ಫಾರ್ಮಲ್‌ನ ಕೊರತೆಯಿಂದ ಬಳಲುತ್ತಿದ್ದ ಸೂರ್ಯಕುಮಾರ್, ಮೈದಾನದ ಮೂಲೆ ಮೂಲೆಗೂ ಚೆಂಡನ್ನ ಹಾರಿಸುವ ಮೂಲಕ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ಇಶಾನ್ ಕಿಶನ್ ಅವರ ಅಬ್ಬರದ ಬ್ಯಾಟಿಂಗ್, ಕೋಚ್ ಗೌತಮ್ ಗಂಭೀರ್ ಅವರ ವಿಶ್ವಾಸವನ್ನು ಹೆಚ್ಚಿಸಿದ್ದು, ಈ ಪಂದ್ಯದಲ್ಲಿ ಅವರಿಗೆ ವಿಕೆಟ್ ಕೀಪಿಂಗ್ ಹೊಣೆಗಾರಿಕೆ ಸಿಗುವ ಸಾಧ್ಯತೆಯಿದೆ.
ಸತತ ಅವಕಾಶಗಳ ನಡುವೆಯೂ ಸಂಜು ಸ್ಯಾಮ್ಸನ್ ವೈಫಲ್ಯ ಅನುಭವಿಸುತ್ತಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ಶುಭಮನ್ ಗಿಲ್ ಬದಲಿಗೆ ಸ್ಥಾನ ಪಡೆದ ಸಂಜು, ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 10 ಮತ್ತು 7 ರನ್ ಗಳಿಸಿ ನಿರಾಸೆ ಮೂಡಿಸಿದ್ದಾರೆ. ವೇಗದ ಬೌಲಿಂಗ್ ಎದುರಿಸಲು ಪರದಾಡುತ್ತಿರುವ ಸಂಜು ಅವರಿಗೆ ಇಂದು ಸತ್ಯಂತ ನಿರ್ಣಯಕ ಪಂದ್ಯವಾಗಿದೆ. ಒಂದು ವೇಳೆ ಇಂದೂ ವೈಫಲ್ಯ ಅನುಭವಿಸಿದರೆ, ಇತರೆ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಿ ಸಂಜು ಅವರನ್ನು ಕೈಬಿಡುವ ಸಾಧ್ಯತೆ ದಟ್ಟವಾಗಿದೆ.
ಬೌಲಿಂಗ್‌ನಲ್ಲಿ ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಸ್ಥಿರತೆ ಕಾಯ್ದುಕೊಂಡಿದ್ದಾರೆ. ಆದರೆ, ಅರ್ಷದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದು (2 ಓವರ್‌ಗಳಲ್ಲಿ 36 ರನ್), ಅವರ ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಸ್ಟಾರ್ ವೇಗಿ ಜಸ್‌ಪ್ರೀತ್ ಬೂಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಬೂಮ್ರಾ ಆಗಮನ ತಂಡದ ಡೆತ್ ಓವರ್‌ಗಳ ಬೌಲಿಂಗ್ ಬಲವನ್ನು ಹೆಚ್ಚಿಸಲಿದೆ.
ಏಕದಿನ ಸರಣಿ ಗೆದ್ದಿದ್ದ ಕಿವೀಸ್ ಪಡೆಗೆ ಟಿ20ಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಕಳೆದ ಪಂದ್ಯದಲ್ಲಿ ಕಿವೀಸ್ ತಂಡದ ಫೀಲ್ಡಿಂಗ್ ಅತ್ಯಂತ ಕಳಪೆಯಾಗಿತ್ತು. ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದ್ದರಿಂದ ಸೂರ್ಯಕುಮಾರ್ ಯಾದವ್ ಅವರಿಗೆ ಜೀವದಾನ ಸಿಕ್ಕಿ ಅದು ಪಂದ್ಯದ ಗತಿಯನ್ನೇ ಬದಲಿಸಿತ್ತು. ಸರಣಿಯಲ್ಲಿ ಜೀವಂತವಾಗಿರಬೇಕಾದರೆ ಕಿವೀಸ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರು ವಿಭಾಗಗಳಲ್ಲೂ ಅಸಾಧಾರಣ ಪ್ರದರ್ಶನ ನೀಡಬೇಕಿದೆ.
ಪಂದ್ಯದ ಮಾಹಿತಿ:
-
ಸ್ಥಳ: ಗುವಾಹಟಿ
-
ಸಮಯ: ರಾತ್ರಿ 7:00 ಗಂಟೆಗೆ
-
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಮತ್ತು ಜಿಯೋ ಸಿನಿಮಾ (ಹಾಟಸ್ಟಾರ್)





