ಇಂದು, (ಸೆಪ್ಟೆಂಬರ್ 28) ಕ್ರಿಕೆಟ್ ಜಗತ್ತಿನ ಎರಡು ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ 2025ರ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಐತಿಹಾಸಿಕ T20 ಪಂದ್ಯವು ಭಾರತಕ್ಕೆ ದಾಖಲೆಯ 9ನೇ ಏಷ್ಯಾಕಪ್ ಟ್ರೋಫಿಯನ್ನು ಗೆಲ್ಲುವ ಅವಕಾಶವನ್ನು ಸಿಕ್ಕಿದೆ. ಇದರ ಜೊತೆಗೆ, ಒಂದೇ ಟೂರ್ನಿಯಲ್ಲಿ ಒಂದೇ ಎದುರಾಳಿಯನ್ನು ಮೂರು ಬಾರಿ ಸೋಲಿಸಿದ ವಿಶ್ವದಾಖಲೆಯನ್ನು ನಿರ್ಮಿಸುವ ಸುವರ್ಣಾವಕಾಶವೂ ಟೀಂ ಇಂಡಿಯಾ ಮುಂದಿದೆ.
ಗುಂಪು ಹಂತ ಮತ್ತು ಸೂಪರ್ 4 ಸುತ್ತಿನಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಮಣ್ಣುಮುಕ್ಕಿಸಿರುವ ಭಾರತ, ಟೂರ್ನಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ T20 ಫೈನಲ್‌ನಲ್ಲಿ ಎದುರಾಗುತ್ತಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಭಾರತ ಒಂದೇ ಟೂರ್ನಿಯಲ್ಲಿ ಒಂದೇ ಎದುರಾಳಿಯನ್ನು ಮೂರು ಬಾರಿ ಸೋಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಟೂರ್ನಿಯಲ್ಲಿ ಭಾರತ ತಂಡವು ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಗುಂಪು ಹಂತದಲ್ಲಿ ಪಾಕಿಸ್ತಾನವನ್ನು ಮೊದಲ ಬಾರಿಗೆ ಸೋಲಿಸಿದ ಭಾರತ, ಸೂಪರ್ 4 ಸುತ್ತಿನಲ್ಲಿ ಮತ್ತೊಮ್ಮೆ ಪಾಕ್‌ಗೆ ಆಘಾತ ನೀಡಿತ್ತು. ಇದೀಗ ಫೈನಲ್‌ನಲ್ಲಿ ಮೂರನೇ ಬಾರಿಗೆ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ ಐದು ಅಥವಾ ಹೆಚ್ಚಿನ ತಂಡಗಳು ಭಾಗವಹಿಸುವ ಟೂರ್ನಿಗಳಲ್ಲಿ ಎರಡು ತಂಡಗಳು ಮೂರು ಬಾರಿ ಮುಖಾಮುಖಿಯಾಗಿರುವುದು ಕೇವಲ ಎರಡು ಬಾರಿ ಮಾತ್ರ. 1983ರ ವಿಶ್ವಕಪ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮೂರು ಬಾರಿ ಎದುರಾದಾಗ ಭಾರತ ಎರಡು ಪಂದ್ಯಗಳನ್ನು ಗೆದ್ದಿತ್ತು. 2004ರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ಭಾರತವನ್ನು ಎರಡು ಬಾರಿ ಸೋಲಿಸಿತ್ತು. ಆದರೆ, ಈ ಬಾರಿ ಭಾರತ ಗೆದ್ದರೆ, ಮೂರು ಬಾರಿಯೂ ಒಂದೇ ಎದುರಾಳಿಯನ್ನು ಸೋಲಿಸಿದ ಮೊದಲ ತಂಡವೆಂಬ ದಾಖಲೆಯನ್ನು ಬರೆಯಲಿದೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುಬೆ.
ಪಾಕಿಸ್ತಾನ: ಸಲ್ಮಾನ್ ಅಘಾ (ನಾಯಕ), ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಸಾಹಿಬ್ಬಾದಾ ಫರ್ಹಾನ್, ಫಖರ್ ಜಮಾನ್, ಸೈಮ್ ಅಯೂಬ್, ಹುಸೇನ್ ತಲತ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ಹಾರಿಸ್ ರೌಫ್, ಅಬ್ರಾರ್ ಅಹ್ಮದ್, ಹಸನ್ ಅಲಿ, ಖುಶಿಲ್ ಶಾ, ಮೊಹಮ್ಮದ್ ವಾಸಿಂ ಜೂನಿಯರ್, ಸಲ್ಮಾನ್ ಮಿರ್ಜಾ.