ಮುಂಬೈ: ಮೈದಾನದ ನಾಲ್ಕೂ ದಿಕ್ಕಿಗೂ ಚೆಂಡನ್ನು ಅಟ್ಟುವ ‘ಮಿಸ್ಟರ್ 360’ ಖ್ಯಾತಿಯ ಸೂರ್ಯಕುಮಾರ್ ಯಾದವ್ ಸದ್ಯ ವಿವಾದವೊಂದರ ಸುಳಿಗೆ ಸಿಲುಕಿದ್ದಾರೆ. ಸದಾ ಕ್ಲೀನ್ ಇಮೇಜ್ ಹೊಂದಿರುವ ಸೂರ್ಯಕುಮಾರ್ ಅವರ ಬಗ್ಗೆ ನಟಿ ಮತ್ತು ಮಾಡೆಲ್ ಖುಷಿ ಮುಖರ್ಜಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಟಿ ಖುಷಿ ಮುಖರ್ಜಿ, ಕ್ರಿಕೆಟಿಗರ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಅಚ್ಚರಿಯ ಉತ್ತರ ನೀಡಿದ್ದಾರೆ. ನನ್ನ ಹಿಂದೆ ಅನೇಕ ಕ್ರಿಕೆಟಿಗರಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ಅವರು ನನಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದರು. ಆದರೆ ಈಗ ನಾವು ಅಷ್ಟಾಗಿ ಸಂಪರ್ಕದಲ್ಲಿಲ್ಲ ಎಂದು ಬಾಂಬ್ ಸಿಡಿಸಿದ್ದಾರೆ.
ನಾನು ಯಾವುದೇ ಕ್ರಿಕೆಟಿಗರ ಜೊತೆ ಡೇಟ್ ಮಾಡಲು ಬಯಸುವುದಿಲ್ಲ. ಯಾವುದೇ ಆಟಗಾರನ ಜೊತೆ ನನ್ನ ಹೆಸರು ಬರುವುದು ನನಗೆ ಇಷ್ಟವಿಲ್ಲ. ನಾನು ಯಾವುದೇ ರೀತಿಯ ಸಂಬಂಧದಲ್ಲಿ ಸಿಲುಕಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸೂರ್ಯಕುಮಾರ್ ಅವರು ಯಾವ ಉದ್ದೇಶಕ್ಕೆ ಮೆಸೇಜ್ ಮಾಡುತ್ತಿದ್ದರು ಅಥವಾ ಅದು ಎಂತಹ ಸಂಭಾಷಣೆ ಎಂಬ ಬಗ್ಗೆ ಅವರು ಹೆಚ್ಚಿನ ವಿವರ ನೀಡಿಲ್ಲ.
29 ವರ್ಷದ ಖುಷಿ ಮುಖರ್ಜಿ ಮೂಲತಃ ಮಾಡೆಲ್ ಆಗಿದ್ದು, ‘ಸ್ಪ್ಲಿಟ್ಸ್ವಿಲ್ಲಾ’ ಮತ್ತು ‘ಲವ್ ಸ್ಕೂಲ್’ ನಂತಹ ಜನಪ್ರಿಯ ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಕೆಲವು ಚಿತ್ರಗಳಲ್ಲಿ ನಟಿಸಿರುವ ಇವರು, 2026ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗ ದಿಢೀರನೆ ಟೀಮ್ ಇಂಡಿಯಾ ಕ್ಯಾಪ್ಟನ್ ಹೆಸರನ್ನು ಪ್ರಸ್ತಾಪಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ.
ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ಸೂರ್ಯಕುಮಾರ್ ಯಾದವ್ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಸೂರ್ಯಕುಮಾರ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಅವರು ಕ್ರಿಕೆಟ್ ಲೋಕದ ಮಾದರಿ ಜೋಡಿ ಎಂದೇ ಹೆಸರುವಾಸಿಯಾದವರು. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಸದಾ ಪ್ರೀತಿಯಿಂದಲೇ ಸುದ್ದಿಯಲ್ಲಿರುತ್ತಾರೆ. ಸದ್ಯ ಸೂರ್ಯಕುಮಾರ್ ತಮ್ಮ ಪತ್ನಿಯೊಂದಿಗೆ ವೈಕುಂಠ ಏಕಾದಶಿ ನಿಮಿತ್ತ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ ಫೋಟೋಗಳು ವೈರಲ್ ಆಗುತ್ತಿವೆ.
ಮೈದಾನದ ಹೊರಗಿನ ಈ ಗಾಸಿಪ್ಗಳ ನಡುವೆಯೂ ಸೂರ್ಯಕುಮಾರ್ ಮುಂದಿನ ಸರಣಿಗಳಿಗೆ ಸಜ್ಜಾಗುತ್ತಿದ್ದಾರೆ. 2026ರ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಅವರು ಭಾರತವನ್ನು ಮುನ್ನಡೆಸಲಿದ್ದಾರೆ. ತದನಂತರ ಫೆಬ್ರವರಿಯಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ನಲ್ಲಿ ಭಾರತದ ನಾಯಕನಾಗಿ ತಂಡವನ್ನು ಚಾಂಪಿಯನ್ ಮಾಡುವ ಜವಾಬ್ದಾರಿ ಅವರ ಮೇಲಿದೆ. ಸದ್ಯ ನಟಿಯ ಈ ಹೇಳಿಕೆಗೆ ಸೂರ್ಯಕುಮಾರ್ ಯಾದವ್ ಯಾವ ರೀತಿ ಪ್ರತಿಕ್ರಿತಿಸುತ್ತಾರೆ ಎಂದು ಕಾದು ನೋಡಬೇಕಿದೆ.





