ಉತ್ತರ ಪ್ರದೇಶದ ವಾರಣಾಸಿ, ಅಂದರೆ ಕಾಶಿ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಪುರಾತನ ನಗರ. ಗಂಗೆಯ ತೀರದಲ್ಲಿರುವ ಈ ಪವಿತ್ರ ನಗರವನ್ನು ಮೋಕ್ಷನಗರಿ ಎಂದು ಕರೆಯಲಾಗುತ್ತದೆ. ಕಾಶಿಯಲ್ಲಿ ಮೃತರಿಗೆ ಅಂತಿಮ ವಿಧಿ-ವಿಧಾನಗಳು ನಡೆಯುವ ಪ್ರಮುಖ ಸ್ಥಳಗಳಾದ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ಗಳಲ್ಲಿ, ನೂರಾರು ವರ್ಷಗಳಿಂದ ದಹನ ಸಂಪ್ರದಾಯ ನಿರಂತರವಾಗಿ ನಡೆಯುತ್ತಲೇ ಬಂದಿದೆ.
ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಮಣಿಕರ್ಣಿಕಾ ಘಾಟ್ ತನ್ನದೇ ಆದ ಅತಿ ವಿಶಿಷ್ಟ ಮತ್ತು ರಹಸ್ಯಮಯ ಆಚರಣೆಗೆ ಪ್ರಸಿದ್ಧ. ಅಂದರೆ, ದಹನದ ನಂತರ ಚಿತೆಯ ಬೂದಿಯಲ್ಲಿ ‘94’ ಎಂಬ ಸಂಖ್ಯೆಯನ್ನು ಬರೆಯುವುದು. ಈ ಸಂಪ್ರದಾಯದ ಹಿಂದೆ ಏನು ತತ್ವ? ಯಾಕೆ 94 ಬರೆಯಲಾಗುತ್ತದೆ? ಇದಕ್ಕೆ ಸಂಬಂಧಿಸಿದ ನಂಬಿಕೆ ಏನು? ಇವನ್ನೆಲ್ಲ ಇಲ್ಲಿ ವಿಶ್ಲೇಷಿಸುತ್ತೇವೆ.
ಮಣಿಕರ್ಣಿಕಾ ಘಾಟ್ : ಮೋಕ್ಷದ ದ್ವಾರ
ಪುರಾಣಗಳ ಪ್ರಕಾರ, ಮಣಿಕರ್ಣಿಕಾ ಘಾಟ್ ಅನ್ನು ಸ್ವತಃ ಶಿವನ ಪ್ರಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಮೃತ ಆತ್ಮಕ್ಕೆ ಮೋಕ್ಷ ದೊರಕುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ದಿನದ 24 ಗಂಟೆಗಳು, ವರ್ಷದಲ್ಲಿ 365 ದಿನಗಳು ಈ ಘಾಟ್‌ನಲ್ಲಿ ಚಿತೆಯ ಬೆಂಕಿ ಎಂದಿಗೂ ಹುರಿಯುತ್ತಲೆ ಇರುತ್ತದೆ.
ಇಲ್ಲಿ ಹತ್ತಾರು ಪೀಳಿಗೆಯಿಂದ ದಹನವಿಧಿಯನ್ನು ನಡೆಸುತ್ತಿರುವ ‘ಡೋಮ್’ ಸಮುದಾಯದವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.
94 ಸಂಖ್ಯೆಯ ನಿಗೂಢ ಆಚರಣೆ
ಸಾಮಾನ್ಯ ಅಂತ್ಯ ಸಂಸ್ಕಾರಗಳಿಗಿಂತ ವಿಭಿನ್ನವಾಗಿ, ಮಣಿಕರ್ಣಿಕಾದಲ್ಲಿ ದಹನ ಪೂರ್ಣವಾದ ನಂತರ ಚಿತಾಭಸ್ಮ ತಣ್ಣಗಾದ ಮೇಲೆ, ಅಲ್ಲಿ ಕೆಲಸ ಮಾಡುವ ಸ್ಮಶಾನ ಕಾರ್ಮಿಕರು ಚಿಕ್ಕ ಮರದ ಕೋಲು, ಕೈ ಬೆರಳನ್ನು ಉಪಯೋಗಿಸಿ ಚಿತೆಯ ಮೇಲೆ ‘94’ ಅನ್ನು ಬರೆಯುತ್ತಾರೆ. ಈ ದೃಶ್ಯವನ್ನು ಮೊದಲು ಕಂಡವರಿಗೆ ಇದು ಪ್ರಶ್ನೆಯನ್ನು ಹುಟ್ಟಿಸುತ್ತದೆ. ಯಾಕೆ 94? ಈ ಸಂಖ್ಯೆಯಲ್ಲಿ ಏನು ವಿಶೇಷ? ಎಂದು.
ಸ್ಥಳೀಯ ಡೊಂಬ ಜನಾಂಗದ ಕೆಲಸಗಾರರು ಈ ಕೆಲಸ ಮಾಡುತ್ತಾರೆ. ಚಿತೆಯ ಬೆಂಕಿ ಆರಿ, ಬೂದಿ ಸಂಗಾಗಿ ತಣ್ಣಗಾದ ಕೂಡಲೇ ಅವರು ಎದ್ದು ನಿಂತು ಶಾಂತವಾಗಿ ‘94’ ಅಂಕಿಯನ್ನು ಬರೆಯುತ್ತಾರೆ. ನಂತರವೇ ಆ ಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ. ಹೊರಗಿನ ಪ್ರವಾಸಿಗರಿಗೆ ಇದು ಕೇವಲ ಒಂದು ಚಿಹ್ನೆ ಎನ್ನಿಸಬಹುದು, ಆದರೆ ಕಾಶಿಯ ಸ್ಥಳೀಯರಿಗೆ ಇದು ಮೋಕ್ಷದ ಕೊನೆಯ ಲಾಂಛನ.
ಮನುಷ್ಯನ ಜೀವನದಲ್ಲಿ ಒಟ್ಟು 100 ಕರ್ಮಗಳಿವೆ ಎಂಬುದು ಪ್ರಾಚೀನ ಹಿಂದೂ ತತ್ತ್ವಶಾಸ್ತ್ರದ ನಂಬಿಕೆ. ಇವುಗಳಲ್ಲಿ ೯49 ಕರ್ಮಗಳು ಮನುಷ್ಯನ ಸ್ವಂತ ನಿಯಂತ್ರಣದಲ್ಲಿರುತ್ತವೆ. ಅಂದರೆ ಅವನ ಆಲೋಚನೆ, ಮಾತು, ಕರ್ಮ (ತ್ರಿಕರಣ ಶುದ್ಧಿ) ಮೂಲಕ ಉಂಟಾಗುವ ಕರ್ಮಗಳು.
ಉಳಿದ 6 ಕರ್ಮಗಳು ಮಾತ್ರ ಮನುಷ್ಯನ ವಶದಲ್ಲಿರುವುದಿಲ್ಲ. ಜನ್ಮ (ಜೀವನದ ಆರಂಭ), ಮೃತ್ಯು (ಜೀವನದ ಅಂತ್ಯ), ಯಶಸ್ಸು, ಅಪಯಶಸ್ಸು , ಲಾಭ, ನಷ್ಟ. ಈ ಆರು ಕರ್ಮಗಳು ದೈವಿಕ ಇಚ್ಛೆಗೆ ಅಥವಾ ಪ್ರಾರಬ್ಧಕ್ಕೆ ಬದ್ಧವೆಂದು ಪರಿಗಣಿಸಲಾಗುತ್ತದೆ.
ಚಿತೆಯಲ್ಲಿ ದೇಹ ಸುಟ್ಟು ಭಸ್ಮವಾದಾಗ, ಆ ಜೀವಿಯು ತಾನು ಸಂಪಾದಿಸಿದ 94 ಕರ್ಮಗಳನ್ನೂ ಒಟ್ಟಿಗೆ ಸುಡುತ್ತಾನೆ ಎಂಬುದು ನಂಬಿಕೆ. ಆದ್ದರಿಂದ ಭಸ್ಮದ ಮೇಲೆ ‘94’ ಬರೆಯುವುದು. ಈ ಜೀವಿಯು ತನ್ನ ನಿಯಂತ್ರಣದಲ್ಲಿದ್ದ ಎಲ್ಲ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಶುದ್ಧನಾಗಿ ಮೋಕ್ಷಕ್ಕೆ ಹೊರಟಿದ್ದಾನೆ ಎಂಬ ಸಾಂಕೇತಿಕ ಘೋಷಣೆ. ಈಗ ಉಳಿದಿರುವ ಆರು ಕರ್ಮಗಳೂ ಶಿವನ ಕೈಯಲ್ಲಿ. ಮಣಿಕರ್ಣಿಕಾ ಘಾಟ್‌ನಲ್ಲಿ ದಹನವಾದವನಿಗೆ ಮೋಕ್ಷ ಖಾತ್ರಿ ಎಂಬುದು ಕಾಶಿವಾಸಿಗಳ ದೃಢ ನಂಬಿಕೆ.
ಈ ಸಂಪ್ರದಾಯ ಯಾವಾಗಿನಿಂದ ಶುರುವಾಯಿತು ಎಂಬುದಕ್ಕೆ ಇತಿಹಾಸದಲ್ಲಿ ನೇರ ದಾಖಲೆ ಇಲ್ಲ. ಆದರೆ ಇದು ವೇದ-ಪುರಾಣ ಕಾಲದಿಂದಲೂ ಇರುವ ತಾತ್ವಿಕ ಆಚರಣೆ ಎನ್ನುತ್ತಾರೆ ಹಿರಿಯರು. ಕೆಲವರು ಇದನ್ನು ತಾಂತ್ರಿಕ ಸಂಪ್ರದಾಯದ ಭಾಗವೆಂದೂ ಹೇಳುತ್ತಾರೆ. ಇನ್ನೂ ಕೆಲವರು ಇದನ್ನು ಅಘೋರಿ ಪಂಥದ ಪ್ರಭಾವ ಎಂದು ನಂಬುತ್ತಾರೆ.
ಇಂದಿಗೂ ಈ ಸಂಪ್ರದಾಯ ಯಥಾವತ್ತಾಗಿ ನಡೆಯುತ್ತಿದೆ. ಚಿತೆ ತಣ್ಣಗಾದ ಕೂಡಲೇ ಆ ಸಂಖ್ಯೆಯನ್ನು ಬರೆಯುವ ಕೆಲಸ ಮಾಡುವವರು ತಮ್ಮ ಜೀವನದಲ್ಲಿ ಯಾವುದೇ ಶುಭಕಾರ್ಯಕ್ಕೂ ಹೋಗುವುದಿಲ್ಲ, ಯಾವುದೇ ಆಚರಣೆ ಮಾಡುವುದಿಲ್ಲ ಎಂಬ ನಿಯಮ ಪಾಲಿಸುತ್ತಾರೆ.





