ಪ್ರಶಾಂತ್, ಎಸ್, ಪ್ರೋಗ್ರಾಂ ಪ್ರೊಡ್ಯೂಸರ್
ಪರ್ವತ, ಕಣಿವೆಗಳ ನಾಡು.. ದೇವರು ನೆಲೆಸಿರೋ ಬೀಡು ಅಂತಲೇ ಪ್ರಖ್ಯಾತಿ ಪಡೆದಿರುವ ಉತ್ತರಾಖಂಡ್‌ನಲ್ಲಿ ಹಿಮಸ್ಪೋಟವಾಗಿದೆ. ಹಿಮಾಲಯದ ಪ್ರದೇಶವಾಗಿರೋ ಉತ್ತರಾಖಂಡ್‌ನಲ್ಲಿ ಮತ್ತೆ ಭಯಾನಕ ಹಿಮಪಾತವಾಗಿದೆ. ಬದರಿನಾಥ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸಿದ್ದು, ಮಾನಾ ಗ್ರಾಮದಲ್ಲಿ ಬರೋಬ್ಬರಿ 57ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ ಎಂದು ವರದಿಯಾಗಿದೆ. ಹಿಮಸ್ಫೋಟ ಸುದ್ದಿ ತಿಳಿಯುತ್ತಿದ್ದಂತೆ (SDRF) ರಾಜ್ಯ ವಿಪತ್ತು ನಿರ್ವಹಣಾ ಪಡೆ, (NDRF)ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಜಿಲ್ಲಾಡಳಿತ, (ITBP) ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಗಡಿ ರಸ್ತೆ ಸಂಸ್ಥೆ ತಂಡಗಳು ಸ್ಥಳದಲ್ಲಿ ಕಾರ್ಯಾಚರಣೆಗೆ ಇಳಿದಿವೆ.
ಮಿಂಚಿನ ಕಾರ್ಯಚರಣೆ ನಡೆಸಿದ SDRF ಮತ್ತು NDRF ತಂಡಗಳು 10 ಕಾರ್ಮಿಕರನ್ನು ರಕ್ಷಣೆ ಮಾಡಿವೆ. ಕಾರ್ಮಿಕರೆಲ್ಲರೂ ಖಾಸಗಿ ಕಂಪನಿಗೆ ಸೇರಿದವರಾಗಿದ್ದಾರೆ. ಉತ್ತರಖಂಡ್‌ನ ಮಾಲಾದಿಂದ ಘಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹಿಮದಡಿ ಸಿಲುಕಿರುವವನ್ನ ರಕ್ಷಿಸಲು ರಕ್ಷಣಾ ತಂಡುಗಳು ಹಾಗೂ ಸ್ಥಳೀಯ ಸರ್ಕಾರ ಶಕ್ತಿ ಮೀರಿ ಪ್ರಯತ್ನ ಮಾಡ್ತಿದೆ.
ಉತ್ತರಖಂಡ್ನ ಚಮೋಲಿ ಜಿಲ್ಲೆಯ ಸುತ್ತಮುತ್ತ ಭಾರೀ ಹಿಮಪಾತವಾಗುತ್ತಿದೆ. ಹೀಗಾಗಿ ಬದ್ರಿನಾಥ್‌ನ ಸುತ್ತಮುತ್ತ ಸಂಚರಿಸದಂತೆ ಪ್ರಯಾಣಿಕರಿಗೆ ನಿರ್ಬಂಧ ಹಾಕಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸುಮಾರು 15ರಿಂದ 20 ಅಡಿ ಹಿಮಪಾತ ಬಿದ್ದಿದೆ. ಎಲ್ಲೆಡೆ ಕತ್ತಲು ಕವಿದ ವಾತಾವರಣ ಆವರಿಸಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬದರಿನಾಥ್ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ.
ಪಶ್ಚಿಮದ ವಾಯುಭಾರ ಕುಸಿತದಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿದೆ ಎಂದು ತಿಳಿದು ಬಂದಿದೆ. ಇದು ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು- ಕಾಶ್ಮೀರದ ಗುಡ್ಡಗಾಡು ಪ್ರದೇಶಗಳಲ್ಲಿ ಹಿಮಪಾತಕ್ಕೂ ಕಾರಣವಾಗಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಉತ್ತರದ ಹಲವು ರಾಜ್ಯಗಳಲ್ಲಿ ಹಿಮಪಾತ ಮತ್ತು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಜೊತೆಗೆ ಜನರು ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದೆ.
ಹಿಮಪಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರಮೋದಿ ಅವರು ಉತ್ತರಖಂಡ್ ಮುಖ್ಯಮಂತ್ರಿ ಪುಷ್ಕರ್ ಧಾಮಿ ಜೊತೆ ಮಾತನಾಡಿ ರಕ್ಷಣಾ ಕಾರ್ಯದ ಬಗ್ಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಅಭಯ ನೀಡಿದ್ದಾರೆ.