ಉತ್ತರ ಪ್ರದೇಶ: ಹೆತ್ತವರು ಎಷ್ಟೇ ಜಗಳವಾಡಿದರೂ ಅಥವಾ ವಿರೋಧಿಸಿದರೂ ಅವರ ಕ್ಷೇಮ ಬಯಸುವ ಮಕ್ಕಳ ನಡುವೆ, ಉತ್ತರ ಪ್ರದೇಶದ ಜಾನ್‌ಪುರದಲ್ಲಿ ಅಕ್ಷರಶಃ ರಕ್ತ ಹೆಪ್ಪುಗಟ್ಟಿಸುವ ಘಟನೆಯೊಂದು ನಡೆದಿದೆ. ಅಂತರ್ಜಾತಿ ವಿವಾಹ ಮತ್ತು ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ ಆದರೆ ಈ ಜಗಳ ವಿಕೋಪಕ್ಕೆ ತಿರುಗಿ ಮಗನೇ ತನ್ನ ಹೆತ್ತವರನ್ನು ಬರ್ಬರವಾಗಿ ಕೊಂದು ಅವರ ದೇಹಗಳನ್ನು ಗರಗಸದಿಂದ ತುಂಡು ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಅಂಬೇಶ್ ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾನೆ. ಮೃತ ದಂಪತಿಗಳು ಶ್ಯಾಮ್ ಬಹದ್ದೂರ್ (62) ಮತ್ತು ಬಬಿತಾ (60). ಆರೋಪಿ ಅಂಬೇಶ್ ಇತ್ತೀಚೆಗೆ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಆದರೆ ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದನು ಆದರೆ ಈ ಮದುವೆ ಪೋಷಕರಿಗೆ ಇಷ್ಟವಿರಲಿಲ್ಲ. ಈ ವಿಷಯವಾಗಿ ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಅಂಬೇಶ್ ಎಷ್ಟೇ ಮನವಿ ಮಾಡಿದ್ದರು ಪೋಷಕರು ಆತನ ಪತ್ನಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು.
ಜಗಳ ತಾರಕಕ್ಕೇರಿದ ಕಾರಣ ಅಂಬೇಶ್ ಮತ್ತು ಆತನ ಪತ್ನಿ ಬೇರ್ಪಡಲು ನಿರ್ಧರಿಸಿದ್ದರು. ಪತ್ನಿಗೆ ಜೀವನಾಂಶ (Alimony) ನೀಡಲು ಹಣದ ಅಗತ್ಯವಿದ್ದ ಕಾರಣ ಅಂಬೇಶ್ ತನ್ನ ತಂದೆಯ ಸಹಾಯ ಕೇಳಿದ್ದನು. ಆದರೆ ತಂದೆ ಶ್ಯಾಮ್ ಬಹದ್ದೂರ್ ಹಣ ನೀಡಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಅಂಬೇಶ್ ಈ ಕೃತ್ಯ ಎಸಗಿದ್ದಾನೆ.
ಕೋಪದ ಭರದಲ್ಲಿ ಅಂಬೇಶ್ ಮೊದಲು ತನ್ನ ತಂದೆ-ತಾಯಿಯನ್ನು ಹೊಡೆದು ಕೊಂದಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸಲು ಮೃತದೇಹಗಳನ್ನು ಮರದ ಕೆಲಸಕ್ಕೆ ಬಳಸುವ ಗರಗಸದಿಂದ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿದ್ದಾನೆ. ಆ ತುಂಡುಗಳನ್ನು ಚೀಲಗಳಲ್ಲಿ ತುಂಬಿಸಿ ಹತ್ತಿರದ ನದಿಗೆ ಎಸೆದಿದ್ದಾನೆ. ದಂಪತಿಗಳು ನಾಪತ್ತೆಯಾಗಿರುವ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಈ ಅಮಾನವೀಯ ಕೃತ್ಯ ಬಯಲಾಗಿದೆ. ಪೊಲೀಸರು ಆರೋಪಿ ಅಂಬೇಶ್‌ನನ್ನು ಬಂಧಿಸಿದ್ದು, ನದಿಯಲ್ಲಿ ದೇಹದ ಭಾಗಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಒಬ್ಬ ಇಂಜಿನಿಯರ್ ಓದಿದ ಮಗ ಇಷ್ಟು ಕ್ರೂರವಾಗಿ ವರ್ತಿಸಿರುವುದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.ಹೆತ್ತ ತಂದೆ ತಾಯಿಯನ್ನೇ ಕ್ರೂರವಾಗಿ ಹತ್ಯೆ ಮಾಡಿದ ಆರೋಪಿ ಅಬೇಶ್ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.





