ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ತೀವ್ರ ಅನಿಶ್ಚಿತತೆ ಮುಂದುವರಿದಿದೆ. ನಾಯಕ ನಟ ವಿಜಯ್ ಅವರು ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಡೌಟ್ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.
ಬಹುಮತ ಸಾಬೀತುಪಡಿಸಲು ಟಿವಿಕೆಗೆ ಇನ್ನೂ ಎರಡು ಶಾಸಕರ ಬೆಂಬಲದ ಅಗತ್ಯವಿದೆ. ಟಿವಿಕೆ ಪಕ್ಷವು ಈವರೆಗೆ 116 ಶಾಸಕರ ಬೆಂಬಲವನ್ನಷ್ಟೇ ಗವರ್ನರ್‌ಗೆ ಸಲ್ಲಿಸಿದೆ. 234 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ ಕನಿಷ್ಠ 118 ಶಾಸಕರ ಬೆಂಬಲ ಬೇಕಾಗಿದೆ.
ಈ ಕೊರತೆಯನ್ನು ತುಂಬಲು ಟಿವಿಕೆ ಭಾರೀ ಕಸರತ್ತು ನಡೆಸುತ್ತಿದೆ. ವಿದುತಲೈ ಚಿರುತೈಗಲ್ ಕಚ್ಚಿ ವಿಸಿಕೆ ಪಕ್ಷದ ಎರಡು ಶಾಸಕರ ಬೆಂಬಲವೇ ಈಗ ಕೀಲಿ ಕೈಯಾಗಿದೆ. ವಿಸಿಕೆ ಪಕ್ಷವು ಇಂದು ಕೆಲವೇ ಕ್ಷಣಗಳಲ್ಲಿ ಅಧಿಕೃತ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ. ವಿಸಿಕೆ ನಾಯಕರು ಟಿವಿಕೆಗೆ ಬೆಂಬಲ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.

ವಿಸಿಕೆಯ ಎರಡು ಶಾಸಕರ ಬೆಂಬಲ ದೊರಕಿದಲ್ಲಿ ವಿಜಯ್ ಸರ್ಕಾರ ರಚನೆಗೆ ದಾರಿ ಸುಗಮವಾಗುತ್ತದೆ. ಒಂದು ಕಡೆ ಟಿವಿಕೆಯ ಕಸರತ್ತು, ಮತ್ತೊಂದು ಕಡೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ತೆರೆಮರೆ ಚರ್ಚೆಗಳು ರಾಜಕೀಯವನ್ನು ಸರ್ಕಸ್‌ನಂತೆ ಮಾಡಿವೆ.
ಡ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರ ರಚಿಸಲು ಗುಪ್ತ ಚರ್ಚೆಗಳನ್ನು ನಡೆಸುತ್ತಿವೆ ಎಂಬ ಮಾಹಿತಿಗಳು ಹೆಚ್ಚಾಗಿವೆ. ಎರಡು ಪಕ್ಷಗಳ ನಾಯಕರು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತಿವೆ. ಟಿವಿಕೆ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಆದರೆ ಸ್ವತಂತ್ರ ಬಹುಮತ ಇಲ್ಲದ ಕಾರಣ ಕಾಂಗ್ರೆಸ್, ಸಿಪಿಐ, ಸಿಪಿಐ ಪಕ್ಷಗಳ ಬೆಂಬಲ ಪಡೆದಿದೆ. ಇದೀಗ ವಿಸಿಕೆಯ ನಿರ್ಧಾರವು ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ. ಗವರ್ನರ್ ರಾಜೇಂದ್ರ ಅರ್ಲೇಕರ್ ಅವರು ಬಹುಮತ ಸಾಬೀತುಪಡಿಸುವಂತೆ ಒತ್ತಾಯಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡು ರಾಜಕೀಯವು ತೀವ್ರ ಉದ್ವಿಗ್ನ ಸ್ಥಿತಿಯಲ್ಲಿದೆ. ವಿಜಯ್ ಅವರ ಪ್ರಮಾಣ ವಿಧಿ ಸಮಾರಂಭವು ಮುಂದೂಡಲ್ಪಟ್ಟಿದದ್ದು, ವಿಸಿಕೆಯ ಅಧಿಕೃತ ನಿಲುವು ಬಹಿರಂಗವಾಗುವುದನ್ನು ರಾಜ್ಯವೇ ಕಾಯುತ್ತಿದೆ. ಡಿಎಂಕೆ-ಎಐಎಡಿಎಂಕೆ ಸಂಘಟಿತ ಪ್ರಯತ್ನಗಳು ಯಶಸ್ವಿಯಾದಲ್ಲಿ ರಾಜಕೀಯ ಸಮೀಕರಣಗಳು ಪೂರ್ಣ ಬದಲಾಗುವ ಸಾಧ್ಯತೆ ಇದೆ.





