ತಮಿಳುನಾಡು ರಾಜಕೀಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಭಾರೀ ರಾಜಕೀಯ ಹೈಡ್ರಾಮಾ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಸರ್ಕಾರ ರಚನೆಗಾಗಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಕಸರತ್ತು ನಡೆಯುತ್ತಿದೆ. ಈ ನಡುವೆ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಿದೆ.
ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರಳ ಬಹುಮತಕ್ಕೆ ಅಗತ್ಯವಿದ್ದ 118 ಶಾಸಕರ ಸಂಖ್ಯೆಯಿಂದ ಕೇವಲ ಎರಡು ಸ್ಥಾನಗಳ ದೂರದಲ್ಲಿತ್ತು. ಈ ಕೊರತೆಯನ್ನು ತುಂಬಿಕೊಳ್ಳಲು ಬೆಳಗ್ಗೆಯಿಂದಲೇ ಕಾಂಗ್ರೆಸ್ ನಾಯಕರು ಭಾರೀ ಸಂಧಾನ ಕಾರ್ಯಾಚರಣೆ ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷವೇ ಟ್ರಬಲ್ ಶೂಟರ್ ಪಾತ್ರವಹಿಸಿ ಎಡಪಕ್ಷಗಳಾದ ಸಿಪಿಐ ಹಾಗೂ ಸಿಪಿಎಂ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿತ್ತು.
ತಮಿಳುನಾಡು ರಾಜಕೀಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಂಟ್ರಿ ಕೊಟ್ಟಿದ್ದು, ಬೆಳಗ್ಗಿನಿಂದ ನಡೆಯುತ್ತಿದ್ದ ಮಾತುಕತೆಗಳು ನಿರ್ಣಾಯಕ ಹಂತ ತಲುಪುತ್ತಿದ್ದಂತೆ ರಾಹುಲ್ ಗಾಂಧಿ ನೇರವಾಗಿ ಮಧ್ಯಪ್ರವೇಶ ಮಾಡಿದ್ದಾರೆ ಎನ್ನಲಾಗುತ್ತಿದೆ. ಅವರ ಹಸ್ತಕ್ಷೇಪದ ಬಳಿಕ ಸಿಪಿಐ ಹಾಗೂ ಸಿಪಿಎಂ ನಾಯಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿರುವ ಮಾಹಿತಿ ಲಭ್ಯವಾಗಿದೆ.
ಇದರಿಂದ ಟಿವಿಕೆಗೆ ಭಾರೀ ಬಲ ಸಿಕ್ಕಂತಾಗಿದ್ದು, ಸರ್ಕಾರ ರಚನೆಗೆ ದಾರಿ ಸುಗಮವಾದಂತಿದೆ. ಇದರ ಜೊತೆಗೆ ವಿಸಿಕೆ ಪಕ್ಷದ ಜೊತೆಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಸಂಜೆ ನಡೆಯಲಿರುವ ಅಂತಿಮ ಸಭೆಯ ಬಳಿಕ ವಿಸಿಕೆ ಅಧಿಕೃತವಾಗಿ ಟಿವಿಕೆಗೆ ಬೆಂಬಲ ಘೋಷಿಸುವ ಸಾಧ್ಯತೆಗಳು ಹೆಚ್ಚಿವೆ.
ಒಂದು ವೇಳೆ ವಿಸಿಕೆ ಬೆಂಬಲ ಘೋಷಿಸಿದರೆ ಟಿವಿಕೆಯ ಸಂಖ್ಯಾಬಲ ನೇರವಾಗಿ 118ಕ್ಕೆ ಏರಲಿದೆ. ಅದೇ ರಾಜ್ಯ ರಾಜಕೀಯದ ಮ್ಯಾಜಿಕ್ ನಂಬರ್ ಆಗಿರುವುದರಿಂದ ದಳಪತಿ ವಿಜಯ್ ಸರ್ಕಾರ ರಚನೆ ಬಹುತೇಕ ಖಚಿತವಾಗಲಿದೆ. ಸರಳ ಬಹುಮತ ಸಾಬೀತಾದ ತಕ್ಷಣವೇ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡುವ ಸಾಧ್ಯತೆ ಇದೆ.
ಇದರೊಂದಿಗೆ ತಮಿಳುನಾಡಿನ 27ನೇ ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಪ್ರಮಾಣವಚನ ಸ್ವೀಕರಿಸುವುದು ಫಿಕ್ಸ್ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಸಿನಿಮಾ ಕ್ಷೇತ್ರದಿಂದ ರಾಜಕೀಯಕ್ಕೆ ಬಂದ ವಿಜಯ್‌ಗೆ ಇದು ಅತಿ ದೊಡ್ಡ ರಾಜಕೀಯ ಜಯವಾಗಬಹುದು.





