ತಿರುಪತಿ: ಕಲಿಯುಗದ ಪ್ರತ್ಯಕ್ಷ ದೈವ ಎಂದೇ ಭಕ್ತರಿಂದ ಆರಾಧಿಸಲ್ಪಡುವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರು ವಿವಿಧ ಬಗೆಯ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಇದೀಗ ಚೆನ್ನೈ ಮೂಲದ ಉದ್ಯಮಿಯೊಬ್ಬರು ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಸ್ವಾಮಿಗೆ ಸಮರ್ಪಿಸುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ (TTD) ಇತಿಹಾಸದಲ್ಲೇ ಗಮನ ಸೆಳೆದಿರುವ ಈ ಬೃಹತ್ ಕಾಣಿಕೆಯ ಮೌಲ್ಯ ಅಂದಾಜು 161 ಕೋಟಿ ರೂಪಾಯಿಯಿಂದ 206 ಕೋಟಿ ರೂಪಾಯಿವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.
ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಈ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಟಿಟಿಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಭಕ್ತಿ ಹಾಗೂ ತಮ್ಮ ಉದ್ಯಮದ ಯಶಸ್ಸಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಕಾಣಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಸಿಎಂ ಸಮ್ಮುಖದಲ್ಲಿ ಚಿನ್ನಾಭರಣ ಹಸ್ತಾಂತರ
ಬಿಗಿ ಪೊಲೀಸ್ ಭದ್ರತೆಯಲ್ಲಿ ತಿರುಮಲಕ್ಕೆ ತರಲಾಗಿದ್ದ 121 ಕೆಜಿ ಚಿನ್ನಾಭರಣಗಳನ್ನು ರಂಗನಾಯಕುಲ ಮಂಟಪದಲ್ಲಿ ನಿರ್ಮಿಸಲಾದ ಮರದ ಸ್ಟ್ಯಾಂಡ್ಗಳ ಮೇಲೆ ಪ್ರದರ್ಶನಕ್ಕೆ ಇಡಲಾಗಿತ್ತು.
ಬೆಳಿಗ್ಗೆ ತಿರುಪತಿಗೆ ಆಗಮಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ಮೂಲಕ ಶ್ರೀವಾರಿಯ ದರ್ಶನ ಪಡೆದರು. ಬಳಿಕ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಉದ್ಯಮಿ ವರ್ಧಮಾನ್ ಜೈನ್ ಅವರು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (EO) ಚಿನ್ನಾಭರಣಗಳನ್ನು ಹಸ್ತಾಂತರಿಸಿದರು.
ಶುಕ್ರವಾರ ನಡೆಯಲಿರುವ ಅಭಿಷೇಕದ ಬಳಿಕ ದೇವಸ್ಥಾನದ ಅರ್ಚಕರು ಈ ಹೊಸ ಆಭರಣಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಿದ್ದಾರೆ ಎಂದು ತಿಳಿಸಲಾಗಿದೆ.
15 ತಿಂಗಳ ಕಾಲ ನಡೆದ ಆಭರಣಗಳ ತಯಾರಿ
ಈ ಬೃಹತ್ ಕಾಣಿಕೆಯ ವಿಶೇಷತೆಯೆಂದರೆ, ಇದರ ತಯಾರಿಗಾಗಿ ಸುಮಾರು 15 ತಿಂಗಳ ಕಾಲ ನುರಿತ ಕುಶಲಕರ್ಮಿಗಳು ಶ್ರಮಿಸಿದ್ದಾರೆ. ಚೆನ್ನೈನ ಪ್ರಸಿದ್ಧ ಜಿಆರ್ಟಿ ಜ್ಯುವೆಲರ್ಸ್ ಸಂಸ್ಥೆಯ ಕುಶಲಕರ್ಮಿಗಳ ತಂಡವು ಆಗಮ ಶಾಸ್ತ್ರದ ನಿಯಮಗಳು ಮತ್ತು ಟಿಟಿಡಿಯ ಪೂಜಾ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಈ ಆಭರಣಗಳನ್ನು ವಿನ್ಯಾಸಗೊಳಿಸಿದೆ.
ಒಟ್ಟು ಒಂಬತ್ತು ಸೆಟ್ಗಳಲ್ಲಿ ಸುಮಾರು 40ರಿಂದ 45 ಬಗೆಯ ಸಾಂಪ್ರದಾಯಿಕ ಚಿನ್ನಾಭರಣಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ ಶ್ರೀವಾರಿಯ ಕಿರೀಟ, ಪದ್ಮ ಪಾದಗಳು, ಡಾಬು ಅಥವಾ ವಡ್ಡಾಣಂ, ಭುಜಕೀರ್ತಿಗಳು, ಶಂಖು-ಚಕ್ರಗಳು, ನಾಗಾಭರಣ, ಅಭಯ ಹಸ್ತಗಳು, ಪೀತಾಂಬರ, ಕಂಠಹಾರಗಳು, ಕಾಲ್ಗೆಜ್ಜೆಗಳು ಹಾಗೂ ಪದ್ಮಪೀಠ ಪ್ರಮುಖವಾಗಿವೆ.
ಉದ್ಯಮಿಯ ಕಾಣಿಕೆಗೆ ಸಿಎಂ ಮೆಚ್ಚುಗೆ
ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ನೀಡಿರುವ ವರ್ಧಮಾನ್ ಜೈನ್ ಅವರ ಭಕ್ತಿಭಾವವನ್ನು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶ್ಲಾಘಿಸಿದ್ದಾರೆ.
ವರದಿಗಳ ಪ್ರಕಾರ, ತಿರುಮಲ ದೇವಸ್ಥಾನವು ಈಗಾಗಲೇ ಸುಮಾರು 10 ಟನ್ಗಳಷ್ಟು ಚಿನ್ನದ ಸಂಗ್ರಹವನ್ನು ಹೊಂದಿದೆ. ಇದೀಗ 121 ಕೆಜಿ ಚಿನ್ನಾಭರಣಗಳ ಸೇರ್ಪಡೆಯಿಂದ ದೇವಸ್ಥಾನದ ಆಭರಣ ಸಂಪತ್ತು ಮತ್ತಷ್ಟು ಹೆಚ್ಚಾಗಲಿದೆ.
ಯಾರು ಈ ವರ್ಧಮಾನ್ ಜೈನ್?
ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಗಳಿಸಿರುವುದರ ಜೊತೆಗೆ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಕಂಪನಿಯ ಶೇ.60ರಷ್ಟು ಷೇರುಗಳನ್ನು ಮಾರಾಟ ಮಾಡಿ ಸುಮಾರು 6,000 ಕೋಟಿ ರೂಪಾಯಿ ಸಂಪಾದಿಸಿದ್ದಾರೆ ಎನ್ನಲಾಗಿದೆ. ಈ ಯಶಸ್ಸಿನ ಒಂದು ಭಾಗವನ್ನು ತಿಮ್ಮಪ್ಪನಿಗೆ ಚಿನ್ನಾಭರಣಗಳ ರೂಪದಲ್ಲಿ ಸಮರ್ಪಿಸಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇವರು ಚೆನ್ನೈನ ಕಂಚಿ ಕಾಮಕೋಟಿ ಚೈಲ್ಡ್ಸ್ ಟ್ರಸ್ಟ್ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸರಿತಾ ಜೈನ್ ಫೌಂಡೇಶನ್ ಮೂಲಕ ‘ವಿದ್ಯಾ ಸೇವಾ’ ಮತ್ತು ‘ವೈದ್ಯ ಸೇವಾ’ ಕಾರ್ಯಕ್ರಮಗಳಡಿ ಬಡವರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ಒದಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕೌಶಲ್ಯ ತರಬೇತಿ ನೀಡಲು ‘ಆವಿಷ್ಕಾರ್’ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ.





