ತ್ರಿಶೂರ್: ಕೇರಳದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ತ್ರಿಶೂರ್ ರೈಲು ನಿಲ್ದಾಣವು ಭಾನುವಾರ (ಜನವರಿ 4) ಬೆಳಿಗ್ಗೆ ಭೀಕರ ಅಗ್ನಿ ದುರಂತವಗಿದೆ. ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್‌ಗೆ ಹೊಂದಿಕೊಂಡಂತಿರುವ ದ್ವಿಚಕ್ರ ವಾಹನ ನಿಲುಗಡೆ ಪ್ರದೇಶದಲ್ಲಿ (Parking Lot) ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದು ಕೆಲವೇ ನಿಮಿಷಗಳಲ್ಲಿ ನೂರಾರು ವಾಹನಗಳು ಸುಟ್ಟು ಕರಕಲಾಗಿದೆ. ಈ ಘಟನೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ವಿವರ:
ಸಾಮಾನ್ಯವಾಗಿ ಭಾನುವಾರದ ಮುಂಜಾನೆ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಬೆಳಿಗ್ಗೆ ಸುಮಾರು 6:45ರ ವೇಳೆಗೆ ಪಾರ್ಕಿಂಗ್ ಏರಿಯಾದ ಒಂದು ಮೂಲೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಪಕ್ಕದ ವಾಹನಗಳಿಗೆ ಹರಡಿತು. ಪಾರ್ಕಿಂಗ್‌ನಲ್ಲಿ ಸಾಲಾಗಿ ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಇಂಧನ (ಪೆಟ್ರೋಲ್) ಇದ್ದಿದ್ದರಿಂದ, ಬೆಂಕಿಯ ತೀವ್ರತೆ ವಿಪರೀತವಾಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಇಡೀ ಪ್ರದೇಶವನ್ನು ಆವರಿಸಿಕೊಂಡಿದ್ದರಿಂದ ದಟ್ಟವಾದ ಕಪ್ಪು ಹೊಗೆ ಆಕಾಶದೆತ್ತರಕ್ಕೆ ಚಿಮ್ಮುತ್ತಿತ್ತು.
ನೂರಾರು ವಾಹನಗಳು ಸಂಪೂರ್ಣ ಭಸ್ಮ
ಈ ಪಾರ್ಕಿಂಗ್ ಸ್ಥಳದಲ್ಲಿ ಪ್ರತಿದಿನ ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗುತ್ತದೆ. ಬೆಂಕಿ ತೀವ್ರವಾಗಿದ್ದರಿಂದ, ಸುಮಾರು 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಗುರುತು ಹಿಡಿಯಲಾಗದಷ್ಟು ಸುಟ್ಟು ಕರಕಲಾಗಿವೆ. ಇನ್ನೂ ಕೆಲವು ವಾಹನಗಳಿಗೆ ಭಾಗಶಃ ಹಾನಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಹತ್ತಿರದ ರೈಲ್ವೆ ಹಳಿಗಳು ಮತ್ತು ನಿಲ್ದಾಣದ ಕಟ್ಟಡಕ್ಕೆ ಬೆಂಕಿ ವ್ಯಾಪಿಸುವುದು ತಪ್ಪಿದೆ. ಗುರುವಾಯೂರು ಮಾರ್ಗವಾಗಿ ಸಂಚರಿಸುವ ರೈಲು ಹಳಿಗಳ ಸಮೀಪವೇ ಈ ಘಟನೆ ನಡೆದಿದ್ದರೂ, ಅದೃಷ್ಟವಶಾತ್ ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ.
ಅಷ್ಟಕ್ಕೂ ಈ ಭೀಕರ ಅವಘಡಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲವಾದರೂ. ಪ್ರಾಥಮಿಕ ವರದಿಯ ಪ್ರಕಾರ, ಯಾವುದಾದರೂ ವಾಹನದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಅಥವಾ ಇಂಧನ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯಿದೆ. ರೈಲ್ವೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಈಗಾಗಲೇ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಕೆಲಸದ ನಿಮಿತ್ತ ಅಥವಾ ಊರಿಗೆ ಹೋಗಲು ತಮ್ಮ ವಾಹನಗಳನ್ನು ಪಾರ್ಕಿಂಗ್‌ನಲ್ಲಿ ಬಿಟ್ಟು ಹೋಗಿದ್ದ ಮಾಲೀಕರು, ವಾಪಸ್ ಬಂದು ನೋಡಿದಾಗ ತಮ್ಮ ವಾಹನಗಳು ಬೂದಿಯಾಗಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ. ರೈಲ್ವೆ ಇಲಾಖೆಯು ಹಾನಿಗೊಳಗಾದ ವಾಹನಗಳ ಚಾಸಿಸ್ ಸಂಖ್ಯೆ ಮತ್ತು ವಿವರಗಳನ್ನು ಕಲೆಹಾಕುತ್ತಿದ್ದು, ಮುಂದಿನ ಕಾನೂನು ಕ್ರಮಗಳ ಬಗ್ಗೆ ಪರಿಶೀಲಿಸುತ್ತಿದೆ.





