ಚೆನ್ನೈ: ತಮಿಳುನಾಡು ವಿಧಾನಸಭೆಯ ಇಂದಿನ (ಜೂನ್ 23) ಅಧಿವೇಶನವು ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಭಾಷಣದ ವೇಳೆ ಕೈಸನ್ನೆ ಮಾಡಿದ್ದು, ವಿರೋಧ ಪಕ್ಷದ ಡಿಎಂಕೆ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಇದರ ಪರಿಣಾಮವಾಗಿ ಡಿಎಂಕೆ ಶಾಸಕರು ಸದನದಿಂದ ಹೊರನಡೆದು ವಾಕೌಟ್ ನಡೆಸಿದರು.
ಸನ್ನೆಯೇ ಹೈಡ್ರಾಮಾಗೆ ಕಾರಣ
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ತಮ್ಮ ಭಾಷಣದ ಮಧ್ಯದಲ್ಲಿ ಕೈ ಎತ್ತಿ ಸನ್ನೆ ಮಾಡಿದರು. ಆಡಳಿತಾರೂಢ ಟಿವಿಕೆ (TVK) ಪಕ್ಷದ ಶಾಸಕರು ತಕ್ಷಣವೇ ಮೇಜುಗಳನ್ನು ತಟ್ಟಿ ಹರ್ಷ ವ್ಯಕ್ತಪಡಿಸಿದರು. ಆದರೆ ಈ ಸನ್ನೆಯೇ ವಿರೋಧ ಪಕ್ಷದ ಶಾಸಕರಿಗೆ ಪ್ರಚೋದನೆಯಾಯಿತು.
“ಇದು ಸದನದ ಗೌರವಕ್ಕೆ ಧಕ್ಕೆ ತರುವ ರೀತಿಯ ಕೃತ್ಯ” ಎಂದು ಆರೋಪಿಸಿದ ಡಿಎಂಕೆ ಶಾಸಕರು, ತಕ್ಷಣವೇ ತಮ್ಮ ಸ್ಥಾನಗಳಿಂದ ಎದ್ದು ಸದನದಿಂದ ಹೊರನಡೆದರು. ಈ ಘಟನೆಯಿಂದ ವಿಧಾನಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಸ್ಟಾಲಿನ್ ಸನ್ನೆಯ ಪ್ರತಿಧ್ವನಿ?
ಈ ಸನ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಏಕೆಂದರೆ, ಈ ವರ್ಷದ ಆರಂಭದಲ್ಲಿ ಡಿಎಂಕೆ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ಮುಗಿಸಿ ಹೊರಬರುವಾಗ ಇದೇ ರೀತಿಯ ಕೈಸನ್ನೆ ಮಾಡಿದ್ದರು. ಆಗ ಸ್ಟಾಲಿನ್ ಅವರ ಈ ಸನ್ನೆ ಸೀಟು ಹಂಚಿಕೆ ಮಾತುಕತೆ ಯಶಸ್ವಿಯಾಗಿದೆ ಎಂಬ ಸಂದೇಶವನ್ನು ಸೂಚಿಸಿತ್ತು.
ಆದರೆ ಸ್ಟಾಲಿನ್ ಆಗ ಸ್ಪಷ್ಟನೆ ನೀಡಿ, “ವರದಿಗಾರರು ಪದೇ ಪದೇ ಪ್ರಶ್ನೆಗಳನ್ನು ಕೇಳುತ್ತಿದ್ದರಿಂದ, ಮಾತುಕತೆ ಮುಗಿಯಿತು ಎಂದು ಸಹಜವಾಗಿ ತೋರಿಸಲು ಹೀಗೆ ಮಾಡಿದ್ದೆ. ಇದು ಯಾವುದೇ ವಿಶೇಷ ರಾಜಕೀಯ ಸಂದೇಶವನ್ನು ಹೊಂದಿಲ್ಲ” ಎಂದು ಹೇಳಿದ್ದರು.
ಇದೀಗ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಅದೇ ಸನ್ನೆಯನ್ನು ವಿಧಾನಸಭೆಯಲ್ಲಿ ಬಳಸಿರುವುದು ಅರ್ಥಪೂರ್ಣವೆಂದು ಪರಿಗಣಿಸಲಾಗಿದೆ.
ವಿಧಾನಸಭೆಯ ಈ ಘಟನೆ ತಮಿಳುನಾಡಿನ ರಾಜಕೀಯ ಬಿಸಿಗೆ ಕಾರಣವಾಗಿದೆ. ಕೆಲವು ವಿಶ್ಲೇಷಕರ ಪ್ರಕಾರ, ಸ್ಟಾಲಿನ್ ಅವರು ಮಾಡಿದ ಸನ್ನೆಯನ್ನು ವಿಜಯ್ ಅವರು ಮರುಸೃಷ್ಟಿಸಿರುವುದು ಸವಾಲಿನ ಸೂಚನೆಯಾಗಿರಬಹುದು. ಇನ್ನೂ ಕೆಲವರ ಪ್ರಕಾರ, ಇದು ಕೇವಲ ಆಕಸ್ಮಿಕ ಘಟನೆಯಾಗಿದೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ಗೊಂದಲದ ವಾತಾವರಣ
ಡಿಎಂಕೆ ಶಾಸಕರು ಸದನದಿಂದ ಹೊರನಡೆದ ಬಳಿಕ, ಆಡಳಿತ ಪಕ್ಷದ ಶಾಸಕರು ಸಿಎಂ ವಿಜಯ್ ಅವರನ್ನು ಸಮರ್ಥಿಸಿ ಮಾತನಾಡಿದರು. “ನಮ್ಮ ಮುಖ್ಯಮಂತ್ರಿ ಸರಳವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ” ಎಂದು ಟಿವಿಕೆ ಶಾಸಕೊಬ್ಬರು ಹೇಳಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ ವಾಕೌಟ್ ನಡೆಸಿದ ಡಿಎಂಕೆ ಶಾಸಕರು, “ಸದನದ ಗೌರವ ಮತ್ತು ಶಿಸ್ತನ್ನು ಕಾಪಾಡುವುದು ಪ್ರತಿಯೊಬ್ಬ ಶಾಸಕರ ಕರ್ತವ್ಯ. ಆದರೆ ಮುಖ್ಯಮಂತ್ರಿಯವರ ವರ್ತನೆ ಸರಿಯಿಲ್ಲ. ಇಂತಹ ಸನ್ನೆಗಳು ಸದನದ ಮರ್ಯಾದೆಗೆ ಧಕ್ಕೆ ತರುತ್ತವೆ” ಎಂದು ಆರೋಪಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ವಿಭಿನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಸಿಎಂ ವಿಜಯ್ ಅವರ ಸನ್ನೆಯನ್ನು ಶ್ಲಾಘಿಸಿದರೆ, ಇನ್ನು ಕೆಲವರು ಡಿಎಂಕೆ ಶಾಸಕರ ವಾಕೌಟ್ ಅನ್ನು ಸಮರ್ಥಿಸಿದ್ದಾರೆ.





