ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯದಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಪಟ್ಟದ ಸ್ಪರ್ಧೆಯಲ್ಲಿರುವ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಈ ಘಟನೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಘಟನೆಯ ವಿವರ :
ಕೋಲ್ಕತ್ತಾದಲ್ಲಿ ಬುಧವಾರ ರಾತ್ರಿ ಸುಮಾರು 10.20ರ ಸಮಯದಲ್ಲಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಹಾರಿಯಾ ಪ್ರದೇಶದಲ್ಲಿ ಈ ಹತ್ಯೆ ನಡೆದಿದೆ. ಚಂದ್ರನಾಥ್ ರಥ್ ಅವರು ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರನ್ನು ಅಡ್ಡಗಟ್ಟಿ, ಕಾರಿನ ಕಿಟಕಿಯಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ಕಾರು ಚಾಲಕ ಗಂಭೀರ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
We strongly condemn the brutal murder of Chandranath Rath in Madhyamgram tonight, along with the killing of three other TMC workers in incidents of post-poll violence allegedly carried out by BJP-backed miscreants over the last three days, despite the Model Code of Conduct being…
— All India Trinamool Congress (@AITCofficial) May 6, 2026
ಸುವೇಂದು ಅಧಿಕಾರಿ ಪ್ರತಿಕ್ರಿಯೆ :
ಆಪ್ತ ಸಹಾಯಕನ ಹತ್ಯೆಯ ಸುದ್ದಿ ತಿಳಿದ ತಕ್ಷಣ ಸುವೇಂದು ಅಧಿಕಾರಿ ಆಸ್ಪತ್ರೆಗೆ ಧಾವಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಘಟನೆಯನ್ನು ಖಂಡಿಸಿ, “ಇದು ಟಿಎಂಸಿ ಕಾರ್ಯಕರ್ತರ ಕೆಲಸ. ವಿರೋಧ ಪಕ್ಷದ ನಾಯಕನ ಆಪ್ತ ಸಹಾಯಕನನ್ನು ಕೊಲ್ಲುವ ಧೃಷ್ಟತೆ ತೋರಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರನಾಥ್ ರಥ್ 2018ರಿಂದ ಸುವೇಂದು ಅವರ ಜೊತೆಗಿದ್ದರು ಮತ್ತು ಇದಕ್ಕೂ ಮುನ್ನ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು.
ಟಿಎಂಸಿ ಪ್ರತಿಕ್ರಿಯೆ :
ತೃಣಮೂಲ ಕಾಂಗ್ರೆಸ್ ಈ ಹತ್ಯೆಯನ್ನು ಖಂಡಿಸಿದ್ದು, ಬಿಜೆಪಿ ಮೇಲೆ ಪ್ರತ್ಯಾರೋಪ ಮಾಡಿದೆ. “ಕಳೆದ ಮೂರು ದಿನಗಳಲ್ಲಿ ಬಿಜೆಪಿ ಪ್ರೇರಿತ ದುಷ್ಕರ್ಮಿಗಳು ನಮ್ಮ ಮೂವರು ಕಾರ್ಯಕರ್ತರನ್ನು ಕೊಂದಿದ್ದಾರೆ. ಎಲ್ಲಾ ಪ್ರಕರಣಗಳ ಸಿಬಿಐ ತನಿಖೆಯಾಗಬೇಕು” ಎಂದು ಟಿಎಂಸಿ ಆಗ್ರಹಿಸಿದೆ.
ಚುನಾವಣಾ ಫಲಿತಾಂಶ ಪ್ರಕಟವಾದ ಮೇ 4ರಿಂದ ರಾಜ್ಯದಲ್ಲಿ ಹಲ್ಲೆ, ಬೆದರಿಕೆ ಮತ್ತು ಕೊಲೆಗಳ ಸರಣಿ ಮುಂದುವರಿದಿದೆ. ಪೊಲೀಸ್ ಇಲಾಖೆ 1,100ಕ್ಕೂ ಹೆಚ್ಚು ಜನರನ್ನು ಮುನ್ನೆಚ್ಚರಿಕೆಯಿಂದ ವಶಕ್ಕೆ ಪಡೆದಿದೆ.





