ತೆಲಂಗಾಣದ ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದ ಮೇಲ್ಭಾಗದ ಛಾವಣಿ ಕುಸಿದಿದ್ದು, 8ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದಾರೆ. ಕಾರ್ಮಿಕರ ರಕ್ಷಣೆಗೆ ಸೇನಾ ಸಿಬ್ಬಂದಿ ಹರಸಾಹಸ ಮಾಡುತ್ತಿದೆ.
ಭಾರತದ ಪವಿತ್ರ ಕ್ಷೇತ್ರಗಳಲ್ಲೊಂದು ಅಕ್ಕಮಹಾದೇವಿ ತಪಸ್ಸು ಮಾಡಿದ್ದ ಈ ಕ್ಷೇತ್ರ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ, ನಿರ್ಮಾಣ ಹಂತದಲ್ಲೇ ದುರಂತವೊಂದಕ್ಕೆ ಮುನ್ನುಡಿ ಬರೆಯುತ್ತಿದೆ. ಇನ್ನೂ ನಿರ್ಮಾಣ ಹಂತದಲ್ಲಿದ್ದ ಸುರಂಗದ ಮೇಲ್ಬಾಗದ ಛಾವಣಿ ಕುಸಿದಿದ್ದು, ಉತ್ತರಾಖಂಡದ ಸುರಂಗ ಕುಸಿತದ ಘಟನೆಯನ್ನ ನೆನಪಿಸ್ತಾ ಇದೆ. ಸುಮಾರು 14 ಕಿಮೀನಷ್ಟು ಉದ್ದದ ಸುರಂಗದ ಒಳಗೆ 8ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ.
ಇದೀಗ ಕಾರ್ಮಿಕರನ್ನು ರಕ್ಷಿಸಲು ಉತ್ತರಾಖಂಡ ಸುರಂಗ ದುರಂತದಲ್ಲಿ ಆಪತ್ಬಾಂಧವರಾಗಿದ್ದ ಸೈನ್ಯ, ಎಸ್‌ಡಿಆರ್‌ಫ್, ಎನ್‌ಡಿಆರ್‌ಎಫ್ ಯೋಧರ ಮೊರೆ ಹೋಗಿದ್ದಾರೆ. ಕೇಂದ್ರ ಸಚಿವ ಉತ್ತಮ ಕುಮಾರ್ ರೆಡ್ಡಿ ಕೂಡಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ಹೊತ್ತುಕೊಂಡಿದ್ದಾರೆ.
ಸುರಂಗದೊಳಗೆ ಅತಿ ದೊಡ್ಡ ಸಮಸ್ಯೆ ಎಂದರೆ ಸುಮಾರು 200 ಮೀಟರ್ ಉದ್ದಕ್ಕೂ ಕೆಸರು ತುಂಬಿಕೊಂಡಿರುವುದು. ಭೂಗರ್ಭದಲ್ಲಿ ಆದ ದಿಢೀರ್ ವ್ಯತ್ಯಾಸವೇ ಭೂಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ. ಭೂಗರ್ಭದೊಳಗೆ ಹೋಗುವ ಕಾರ್ಮಿಕರಿಗಾಗಿ ಸಂಪರ್ಕ ವ್ಯವಸ್ಥೆಯೂ ಇರುತ್ತದೆ. ಆದರೆ ಸಂಪರ್ಕಿಸಿ ರಚಿಸಲ್ಪಟ್ಟಿದೆ ಏರ್ ಚೇಂಬರ್ ಮತ್ತು ಕನ್ವೇಯರ್ ಬೆಲ್ಟ್ ಎರಡೂ ಕುಸಿದು ಹೋಗಿವೆ. ಒಳಗೆ ಇರುವ ಕಾರ್ಮಿಕರ ಸ್ಥಿತಿಗತಿ ಏನು ಅನ್ನೋದರ ಬಗ್ಗೆ ಸ್ಪಷ್ಟತೆ ಇಲ್ಲ.
2023ರ ನವೆಂಬರ್‌ನಲ್ಲಿ ಉತ್ತರಾಖಂಡದಲ್ಲಿ ಸುರಂಗ ಕುಸಿದು, 41 ಕಾರ್ಮಿಕರು ಸುರಂಗದೊಳಗೆ ಸಿಲುಕಿದ್ದರು. ಸತತ 17 ದಿನಗಳ ಕಾರ್ಯಾಚರಣೆ ನಂತರ, ಎಲ್ಲ ಕಾರ್ಮಿಕರನ್ನೂ ಸುರಕ್ಷಿತವಾಗಿ ಹೊರತರಲಾಗಿತ್ತು. ಆದರೆ ಉತ್ತರಾಖಂಡದ ಪರಿಸ್ಥಿತಿಯೇ ಬೇರೆ, ಇಲ್ಲಿನ ಪರಿಸ್ಥಿತಿಯೇ ಬೇರೆ. ಉತ್ತರಾಖಂಡದಲ್ಲಿ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ತಕ್ಷಣವೇ ಆಕ್ಸಿಜನ್, ಆಹಾರ ಪೂರೈಸುವುದಕ್ಕೆ ಸಾಧ್ಯವಾಗಿತ್ತು. ಕಾರ್ಮಿಕರಿಗೆ ಓಡಾಡುವುದಕ್ಕೆ, ನಿತ್ಯಕರ್ಮಗಳಿಗೆ ಆಗುವಷ್ಟು ಜಾಗವೂ ಸುರಂಗದೊಳಗೆ ಇತ್ತು. ಆದರೆ ಶ್ರೀಶೈಲಂ ಸುರಂಗದ ಪರಿಸ್ಥಿತಿ ಏನು ಎನ್ನುವುದು ಇದೂವರೆಗೆ ಯಾರಿಗೂ ಗೊತ್ತಿಲ್ಲ. ಅಲ್ಲದೆ ವಾಟರ್ ಲೀಕೇಜ್ ಆಗುತ್ತಿದೆ. ಸುರಂಗದೊಳಗೆ ನೀರು ತುಂಬುತ್ತಲೇ ಇದೆ. ಕಾರ್ಮಿಕರ ರಕ್ಷಣೆ ಅಷ್ಟು ಸುಲಭವಲ್ಲ.