ಮುಂಬೈ (ಜುಲೈ 23): ದೇಶಾದ್ಯಂತ ಸಂಚಲನ ಮೂಡಿಸಿರುವ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಅವರು, ವಿದ್ಯಾರ್ಥಿಗಳ ಧೈರ್ಯ ಮತ್ತು ಪ್ರಾಮಾಣಿಕತೆಯನ್ನು ಶ್ಲಾಘಿಸುವುದರ ಜೊತೆಗೆ, ಈ ಹೋರಾಟವನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
It was such a peaceful movement, feel so sad that it had to take a violent turn. My heart goes out to the students and their families who were hurt. Paper leak is a very serious issue, and I am glad to know n see that the kids of our country have come together for a better…
— Salman Khan (@BeingSalmanKhan) July 22, 2026
- NEET ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ.
- ಪ್ರತಿಭಟನೆ ಹಿಂಸಾತ್ಮಕವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಲ್ಲು
- ವಿದ್ಯಾರ್ಥಿಗಳ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿಯಬಾರದು ಎಂದು ಮನವಿ
ಪ್ರತಿಭಟನೆ ಆರಂಭದಲ್ಲಿ ಶಾಂತಿಯುತವಾಗಿತ್ತು. ಆದರೆ ಬಳಿಕ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿರುವುದು ನೋವು ತಂದಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. “ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ನೋವಿಗೆ ನನ್ನ ಹೃದಯ ಮಿಡಿಯುತ್ತದೆ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿರುವುದು ಬೇಸರದ ಸಂಗತಿ” ಎಂದು ಅವರು ಬರೆದಿದ್ದಾರೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದಾದ್ಯಂತ ವಿದ್ಯಾರ್ಥಿಗಳು ಒಂದಾಗಿ ಧ್ವನಿ ಎತ್ತುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. “ಕಷ್ಟಪಟ್ಟು ಓದಿ ಉತ್ತಮ ಭವಿಷ್ಯ ನಿರ್ಮಿಸಲು ವಿದ್ಯಾರ್ಥಿಗಳು ತೋರಿಸುತ್ತಿರುವ ಸಮರ್ಪಣೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ. ಈ ತಲೆಮಾರು ಭಾರತದ ಹೆಮ್ಮೆ” ಎಂದು ಅವರು ಪ್ರಶಂಸಿಸಿದ್ದಾರೆ.
ಈ ಹೋರಾಟವನ್ನು ರಾಜಕೀಯ ಬಣ್ಣ ಬಳಿಯಬಾರದು ಎಂದು ಸಲ್ಮಾನ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ. “ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ವಿಷಯ. ಇದರ ಶ್ರೇಯಸ್ಸು ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರವೂ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಭಾರತ ಮುಂದಿನ ದಿನಗಳಲ್ಲಿ ಜಾಗತಿಕ ಶಿಕ್ಷಣದ ಕೇಂದ್ರವಾಗಿ ಬೆಳೆಯಬೇಕು ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ವಿದೇಶಿ ವಿದ್ಯಾರ್ಥಿಗಳು ಸಹ ಭಾರತಕ್ಕೆ ಶಿಕ್ಷಣಕ್ಕಾಗಿ ಬರುವಂತಹ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸಬೇಕು ಎಂದು ಕರೆ ನೀಡಿದ್ದಾರೆ.
ಸಲ್ಮಾನ್ ಖಾನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವರು ವಿದ್ಯಾರ್ಥಿಗಳ ಪರವಾಗಿ ಅವರು ವ್ಯಕ್ತಪಡಿಸಿದ ಬೆಂಬಲವನ್ನು ಸ್ವಾಗತಿಸಿದ್ದಾರೆ.
NEET ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಹಲವಾರು ರಾಜಕೀಯ ನಾಯಕರು ಬೆಂಬಲ ಸೂಚಿಸಿದ್ದಾರೆ.





