ಶಬರಿಮಲೆ: ಪ್ರತಿವರ್ಷದಂತೆ ಈ ಬಾರಿಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಇಂದು ಸಂಜೆ 6.44 ಕ್ಕೆ ಆಕಾಶದಲ್ಲಿ ಮಕರ ಜ್ಯೋತಿ ಗೋಚರಿಸಿತು. ಈ ದೃಶ್ಯವನ್ನ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಕಣ್ತುಂಬಿಕೊಂಡರು. ಮಕರ ಜ್ಯೋತಿ ದರ್ಶನ ಪಡೆಯುವಾಗ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಅಯ್ಯಪ್ಪನನ್ನ ಸ್ಮರಿಸಿದರು. ಪೊನ್ನಂಬಲಮೇಡುವಿನಲ್ಲಿ ದಿವ್ಯ ಜ್ಯೋತಿ ಬೆಳಗುವ ಮೂಲಕ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಇದು ಅತ್ಯಂತ ಶ್ರೇಷ್ಠ ಕ್ಷಣವಾಗಿದೆ.
ಇಂದು (ಜನವರಿ 14) ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಕ್ರಮಣ ಕ್ಷಣದಂದು ಶಬರಿಮಲೆ ದೇವಸ್ಥಾನದಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಪವಿತ್ರವಾದ ಜ್ಯೋತಿಯು ಮೂರು ಬಾರಿ ಗೋಚರಿಸುತ್ತದೆ. ಭಕ್ತರ ನಂಬಿಕೆಯ ಪ್ರಕಾರ, ಈ ಜ್ಯೋತಿಯು ಸಾಕ್ಷಾತ್ ಅಯ್ಯಪ್ಪ ಸ್ವಾಮಿಯ ದಿವ್ಯ ಉಪಸ್ಥಿತಿಯನ್ನು ಸೂಚಿಸುತ್ತದೆ. ಮಲಯಾಳಂನಲ್ಲಿ ಮಕರ ಎಂದರೆ ಮಕರ ರಾಶಿ ಮತ್ತು ವಿಳಕ್ಕು ಎಂದರೆ ಬೆಳಕು ಎಂದರ್ಥ. ಆಕಾಶದಲ್ಲಿ ಕಾಣುವ ದಿವ್ಯ ನಕ್ಷತ್ರವನ್ನು ಮಕರ ಜ್ಯೋತಿ ಎನ್ನಲಾಗುವುದು ಮತ್ತು ಬೆಟ್ಟದ ಮೇಲೆ ಮೂರು ಬಾರಿ ಬೆಳಗುವ ದೀಪವನ್ನು ಮಕರವಿಳಕ್ಕು ಎನ್ನಲಾಗುತ್ತದೆ.
ಇಂದು ಪಂದಳದ ರಾಜಮನೆತನದಿಂದ ತರಲಾಗುವ ಪವಿತ್ರ ಆಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ಅಲಂಕರಿಸಲಾಯಿತು. ಇದನ್ನು ತಿರುವಾಭರಣ ಪೂಜೆ ಎಂದು ಕರೆಯುತ್ತಾರೆ. ಪಂದಳದಿಂದ ಶಬರಿಮಲೆಗೆ ಈ ಆಭರಣಗಳನ್ನು ಭವ್ಯ ಮೆರವಣಿಗೆಯಲ್ಲಿ ತರುವಾಗ, ಆಕಾಶದಲ್ಲಿ ಗರುಡ ಹಕ್ಕಿಯು ದೇವಸ್ಥಾನದ ಮೇಲೆ ಪ್ರದಕ್ಷಿಣೆ ಹಾಕುತ್ತದೆ ಎಂಬುದು ನಂಬಿಕೆ. ಈ ಗರುಡನನ್ನು ಭಗವಾನ್ ವಿಷ್ಣುವಿನ ಸ್ವರೂಪವೆಂದು ಭಕ್ತರು ಭಾವಿಸುತ್ತಾರೆ.
ಶಬರಿಮಲೆ ಯಾತ್ರೆಯು ಕೇವಲ ಒಂದು ಪ್ರವಾಸವಲ್ಲ, ಅದು ಅಂತರಾತ್ಮದ ಶುದ್ಧೀಕರಣದ ಪಯಣ. ಕಠಿಣವಾದ 41 ದಿನಗಳ ವ್ರತ, ಕಪ್ಪು ವಸ್ತ್ರ ಧರಿಸುವುದು, ಇರುಮುಡಿ ಕಟ್ಟು ಹೊರುವುದು ಮತ್ತು ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರ ಪಠಣವು ಭಕ್ತರಲ್ಲಿ ಅಪಾರ ದೈವಿಕ ಶಕ್ತಿಯನ್ನು ತುಂಬುತ್ತದೆ. ಮಕರ ಜ್ಯೋತಿಯ ದರ್ಶನದಿಂದ ಭಕ್ತರ ಸರ್ವ ಪಾಪಗಳು ಪರಿಹಾರವಾಗಿ, ಶ್ರೇಯಸ್ಸು ಉಂಟಾಗುತ್ತದೆ ಎಂಬುದು ಅಚಲವಾದ ನಂಬಿಕೆ. 2026ರ ಈ ದಿನ ಸಾವಿರಾರು ಭಕ್ತರು ಈ ಜ್ಯೋತಿಯನ್ನ ಕಣ್ತುಂಬಿಕೊಂಡಿದ್ದಾರೆ.
ಮಕರ ಜ್ಯೋತಿ ಕಾಣುವ ಈ ಶುಬ ಸಂದರ್ಭಕ್ಕಾಗಿ ಸಾವಿರಾರು ಭಕ್ತರು ದೇವಾಯಕ್ಕೆ ಭೇಟಿ ನೀಡಿದ್ದರು. ಹಿಂದಿನ ವರ್ಷಕ್ಕಿಂತ ಈ ಬಾರಿ ಅತೀ ಹೆಚ್ಚು ಭಕ್ತರು ಸೇರಿದ್ದರು. 30,000 ಆನ್‌ಲೈನ್ ಹಾಗೂ 5000 ಕೌಂಟರ್ ಟಿಕೆಟ್ ಹೊಂದಿದವರಿಗೆ ಮಾತ್ರವೇ ದೇವಾಲಯದ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರ ಭದ್ರತೆಗಾಗಿ 2000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, 136 ಸ್ವಯಂಸೇವಕರು, 31 ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಹೀಗೆ ಸಕಲ ಬದ್ರತೆಯೊಂದಿಗೆ ಭಕ್ತರು ಈ ಬಾರಿಯ ಮಕರ ಜ್ಯೋತಿ ದರ್ಶನ ಪಡೆದಿದ್ದಾರೆ.





