ನವದೆಹಲಿ, ಆಗಸ್ಟ್ 15: ದೇಶದ 80ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಸಂಕಲ್ಪವನ್ನು ಮತ್ತೊಮ್ಮೆ ಒತ್ತಿ ಹೇಳಿದರು. “ಹರ್ ಘರ್ ತಿರಂಗ” ಮೂಲಕ ದೇಶದ ಪ್ರತಿಯೊಬ್ಬರ ಮನದಲ್ಲೂ ರಾಷ್ಟ್ರಭಕ್ತಿ ಮೂಡಿದೆ ಎಂದು ಹೇಳಿದ ಅವರು, ಮಹಾನ್ ಸಾಧಕರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ ಹೊಸ ಸಂಕಲ್ಪದೊಂದಿಗೆ ಭಾರತ ಮುನ್ನಡೆಯುತ್ತಿದೆ ಎಂದರು.
ಕೆಂಪುಕೋಟೆಯಲ್ಲಿ ವಂದೇ ಮಾತರಂನ 150ನೇ ವರ್ಷಾಚರಣೆಯ ಐತಿಹಾಸಿಕ ಸಂದರ್ಭವನ್ನು ಉಲ್ಲೇಖಿಸಿದ ಮೋದಿ, ಭಾರತದ ಕನಸುಗಳು ಅತ್ಯುನ್ನತವಾಗಿರಬೇಕು ಎಂದು ಹೇಳಿದರು. ಸ್ವಾತಂತ್ರ್ಯದ 100ನೇ ವರ್ಷಾಚರಣೆಯ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವುದು ದೇಶದ ದೊಡ್ಡ ಗುರಿಯಾಗಿದೆ ಎಂದರು.
ಕಳೆದ 12 ವರ್ಷಗಳಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದಿದೆ ಎಂದು ಪ್ರಧಾನಿ ವಿವರಿಸಿದರು. ಮೊಬೈಲ್ ಉತ್ಪಾದನೆ, ರೈಲ್ವೆ, ಡಿಜಿಟಲ್ ಪಾವತಿ, ಇಂಟರ್ನೆಟ್ ಬಳಕೆ, ಮೆಟ್ರೋ ರೈಲು ಹಾಗೂ ಮನೆ ಮನೆಗೆ ನಲ್ಲಿ ನೀರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಪ್ರಗತಿ ಸಾಧಿಸಿದೆ ಎಂದು ಹೇಳಿದರು. ದೇಶದ ಕೋಟ್ಯಂತರ ಜನರು ಬಡತನದಿಂದ ಹೊರಬಂದಿದ್ದು, ಜನರಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಮತ್ತು ಆತ್ಮನಿರ್ಭರತೆಯ ಭಾವನೆ ಹೆಚ್ಚಾಗಿದೆ ಎಂದು ತಿಳಿಸಿದರು.
ಆತ್ಮನಿರ್ಭರತೆ ಭಾರತದ ಮುಂದಿನ ಹೆಜ್ಜೆಯ ಪ್ರಮುಖ ಆಧಾರವಾಗಬೇಕು ಎಂದು ಮೋದಿ ಹೇಳಿದರು. ರಕ್ಷಣಾ ಕ್ಷೇತ್ರದಿಂದ ಸೆಮಿಕಂಡಕ್ಟರ್‌ವರೆಗೆ, ಅಪರೂಪದ ಖನಿಜಗಳಿಂದ ಇಂಧನದವರೆಗೆ ಭಾರತ ತನ್ನ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂದರು. ದೇಶದಲ್ಲಿ ಈಗಾಗಲೇ ಸೆಮಿಕಂಡಕ್ಟರ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಘಟಕಗಳು ಆರಂಭವಾಗಲಿವೆ ಎಂದು ಹೇಳಿದರು.
ಇಂಧನ ಭದ್ರತೆಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, 2040ರ ವೇಳೆಗೆ 100 ಗಿಗಾವಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ ಎಂದರು. ಸೌರ ವಿದ್ಯುತ್ ಉತ್ಪಾದನೆಯಲ್ಲೂ ಭಾರತ ಭಾರೀ ಪ್ರಗತಿ ಸಾಧಿಸಿದ್ದು, ಪಿಎಂ ಸೂರ್ಯ ಘರ್ ಯೋಜನೆಯ ಮೂಲಕ ಮನೆಗಳಿಗೆ ಸೌರ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು. ರೈಲ್ವೆ ವಿದ್ಯುದೀಕರಣ, ಹೈಡ್ರೋಜನ್ ರೈಲುಗಳು ಹಾಗೂ ಹಸಿರು ಇಂಧನದತ್ತಲೂ ದೇಶ ಗಮನ ಹರಿಸುತ್ತಿದೆ ಎಂದರು.
ಕೋವಿಡ್ ಮಹಾಮಾರಿ ಮತ್ತು ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಸವಾಲುಗಳ ನಡುವೆಯೂ ಭಾರತ ಅಗತ್ಯ ವಸ್ತುಗಳ ಲಭ್ಯತೆಯನ್ನು ಕಾಪಾಡಿಕೊಂಡಿದೆ ಎಂದು ಮೋದಿ ಹೇಳಿದರು. ರೈತರಿಗೆ ಯೂರಿಯಾ ಮತ್ತು ಡಿಎಪಿ ಕಡಿಮೆ ದರದಲ್ಲಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ವ್ಯಾಪಾರ ಒಪ್ಪಂದಗಳ ಮೂಲಕ ಭಾರತದ ಎಂಎಸ್‌ಎಂಇಗಳು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಬೇಕು ಎಂದು ಕರೆ ನೀಡಿದ ಮೋದಿ, ಜವಳಿ, ಔಷಧ, ಕೃಷಿ ಉತ್ಪನ್ನಗಳು, ಸಿರಿಧಾನ್ಯಗಳು ಮತ್ತು ಮಸಾಲೆಗಳಿಗೆ ವಿಶ್ವಾದ್ಯಂತ ಬೇಡಿಕೆ ಹೆಚ್ಚಿಸುವ ಅಗತ್ಯವಿದೆ ಎಂದರು. “ಭಾರತ ವಿಶ್ವದ ಮಾರುಕಟ್ಟೆಯಾಗುವುದಷ್ಟೇ ಅಲ್ಲ, ವಿಶ್ವಕ್ಕೆ ಸರಕು ಪೂರೈಸುವ ದೇಶವಾಗಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮುಂದಿನ ಐದಾರು ವರ್ಷಗಳಲ್ಲಿ ಉತ್ಪಾದನೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ತಂತ್ರಜ್ಞಾನ, ಮೂಲಸೌಕರ್ಯ, ರಕ್ಷಣಾ ಕ್ಷೇತ್ರ, ಹಸಿರು-ನೀಲಿ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು. ಕೃತಕ ಬುದ್ಧಿಮತ್ತೆ, ಕ್ವಾಂಟಂ ತಂತ್ರಜ್ಞಾನ, ಡೇಟಾ ಸೆಂಟರ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಇನ್ನಷ್ಟು ಮುನ್ನಡೆಯಬೇಕು ಎಂದರು.
ಯೋಗ, ಆಯುರ್ವೇದ, ಭಾರತೀಯ ಸಿನಿಮಾ, ಡಿಜಿಟಲ್ ಕಂಟೆಂಟ್ ಮತ್ತು ಕರಕುಶಲತೆ ಭಾರತದ ಸಾಫ್ಟ್ ಪವರ್ ಅನ್ನು ಜಗತ್ತಿನಾದ್ಯಂತ ವಿಸ್ತರಿಸುತ್ತಿವೆ ಎಂದು ಮೋದಿ ಹೇಳಿದರು. ಕ್ರೀಡಾ ಕ್ಷೇತ್ರದಲ್ಲೂ ಭಾರತ ವಿಶ್ವಮಟ್ಟದ ಸಾಧನೆ ಮಾಡಬೇಕು ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.
ಫಾರ್ಚೂನ್-500 ಕಂಪನಿಗಳಲ್ಲಿ ಹೆಚ್ಚಿನ ಭಾರತೀಯ ಕಂಪನಿಗಳು ಸ್ಥಾನ ಪಡೆಯಬೇಕು, ವಿಶ್ವದ ಪ್ರಮುಖ ಬ್ಯಾಂಕ್‌ಗಳು ಮತ್ತು ಫಾರ್ಮಾ ಕಂಪನಿಗಳ ಪಟ್ಟಿಯಲ್ಲಿ ಭಾರತದ ಸಂಸ್ಥೆಗಳು ಮುಂಚೂಣಿಗೆ ಬರಬೇಕು ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳೂ ಸುಧಾರಣೆಗಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.





