ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಪ್ರಿಯ ನಟ ಪವನ್ ಕಲ್ಯಾಣ್ ಅವರಿಗೆ ಶನಿವಾರ ಬೆಳಿಗ್ಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಭೆಯಲ್ಲಿ ಭಾಗವಹಿಸುತ್ತಿದ್ದಾಗಲೇ ಅವರು ತೀವ್ರ ಅಸ್ವಸ್ಥರಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯಕೀಯ ತಂಡವು ನಡೆಸಿದ ಪರೀಕ್ಷೆ ಮತ್ತು MRI ಸ್ಕ್ಯಾನಿಂಗ್ ನಂತರ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನಿರ್ಧರಿಸಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಪವನ್ ಕಲ್ಯಾಣ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ವಿವರ:
ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಮುಖ್ಯ ಸಭೆಯಲ್ಲಿ ಭಾಗವಹಿಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದ ದರು. ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ಅನ್ನಾ ಕೊನಿಡೇಲಾ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಪವನ್ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳ ಪ್ರೀತಿ ಮತ್ತು ಪ್ರಾರ್ಥನೆಗೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.
ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಮತ್ತು ಸೋದರಳಿಯ ಸಾಯಿ ಧರಂ ತೇಜ್ ಕೂಡ ಸೋಶಿಯಲ್ ಮೀಡಿಯಾ ಮೂಲಕ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪ್ರಧಾನಿ ಮೋದಿಯಿಂದ ಫೋನ್:
ಪ್ರಧಾನಿ ನರೇಂದ್ರ ಮೋದಿ ಅವರು ಪವನ್ ಕಲ್ಯಾಣ್ ಅವರ ಆರೋಗ್ಯ ವಿಚಾರಿಸಿ ಫೋನ್ ಮಾಡಿದ್ದು, ಶೀಘ್ರ ಚೇತರಿಕೆಯನ್ನು ಹಾರೈಸಿದ್ದಾರೆ. ಪವನ್ ಕಲ್ಯಾಣ್ ಅವರು ಮೋದಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ವೈದ್ಯರ ಸಲಹೆಯಂತೆ ಪವನ್ ಕಲ್ಯಾಣ್ ಅವರು ಕನಿಷ್ಠ 7 ರಿಂದ 10 ದಿನಗಳ ಕಾಲ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಪೂರ್ಣ ಚೇತರಿಕೆಗೆ ಇನ್ನೂ ಹೆಚ್ಚು ಸಮಯ ಬೇಕಾಗಬಹುದು ಎಂದು ವೈದ್ಯಕೀಯ ತಂಡ ತಿಳಿಸಿದೆ.
ಈ ಅನಿರೀಕ್ಷಿತ ಘಟನೆಯು ಪವನ್ ಕಲ್ಯಾಣ್ ಅಭಿಮಾನಿಗಳು ಮತ್ತು ರಾಜಕೀಯ ವಲಯದಲ್ಲಿ ಆತಂಕವನ್ನುಂಟು ಮಾಡಿತ್ತು. ಆದರೆ ಈಗ ಅವರ ಆರೋಗ್ಯ ಸ್ಥಿರವಾಗಿರುವುದು ಸಂತಸದ ಸುದ್ದಿಯಾಗಿದೆ.





