ನವದೆಹಲಿ, ಆ.13: ಆನ್‌ಲೈನ್‌ನಲ್ಲಿ ಕ್ಯಾಬ್ ಅಥವಾ ಆಟೋ ಬುಕ್ ಮಾಡುವ ವೇಳೆ ಚಾಲಕರಿಗೆ ಮುಂಗಡವಾಗಿ ಟಿಪ್ಸ್ ನೀಡುವ ವ್ಯವಸ್ಥೆಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಎಲ್ಲಾ ರೈಡ್-ಹೇಲಿಂಗ್ ಆ್ಯಪ್‌ಗಳು ‘Pre-Ride Tips’ ಅಥವಾ ಬುಕಿಂಗ್‌ಗೂ ಮುನ್ನ ಟಿಪ್ಸ್ ಕೇಳುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ದೇಶನ ನೀಡಿದೆ.
ಕ್ಯಾಬ್ ಬುಕ್ ಮಾಡುವಾಗ “ಟಿಪ್ ಸೇರಿಸಿ, ಬೇಗನೆ ರೈಡ್ ಪಡೆಯಿರಿ” ಎಂಬ ಸಂದೇಶ ಈಗ ಇನ್ನು ಮುಂದೆ ಕಾಣಿಸುವುದಿಲ್ಲ. ಪ್ರಯಾಣಿಕರ ಮೇಲೆ ಹೆಚ್ಚುವರಿ ಹಣ ನೀಡುವಂತೆ ಮಾನಸಿಕ ಒತ್ತಡ ಹೇರುವ ಈ ಪದ್ಧತಿಯನ್ನು ಕೇಂದ್ರ ಸರ್ಕಾರ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ–2025 ಅಡಿಯಲ್ಲಿ ನಿಷೇಧಿಸಿದೆ.
ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಹಾಗೂ ರ‍್ಯಾಪಿಡೋ ಆ್ಯಪ್‌ಗಳಲ್ಲಿ ರೈಡ್ ಬುಕ್ ಮಾಡುವಾಗ ಚಾಲಕರು ಬೇಗನೆ ರಿಕ್ವೆಸ್ಟ್ ಸ್ವೀಕರಿಸಲು 20 ರೂ., ರೂ. 50 ಅಥವಾ ಹೆಚ್ಚಿನ ಮೊತ್ತದ ಟಿಪ್ಸ್ ಸೇರಿಸುವಂತೆ ಆಯ್ಕೆ ನೀಡಲಾಗುತ್ತಿತ್ತು. ಅನೇಕ ಪ್ರಯಾಣಿಕರು ಟಿಪ್ಸ್ ನೀಡದಿದ್ದರೆ ರೈಡ್ ಸಿಗುವುದಿಲ್ಲ ಎಂಬ ಆತಂಕದಿಂದ ಹೆಚ್ಚುವರಿ ಹಣ ಪಾವತಿಸುತ್ತಿದ್ದರು. ಈ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ.
ಹೊಸ ಮಾರ್ಗಸೂಚಿ ಪ್ರಕಾರ, ಬುಕಿಂಗ್ ಮಾಡುವ ಮೊದಲು ಯಾವುದೇ ರೀತಿಯ ಟಿಪ್ಸ್ ಕೇಳುವುದು ಅಥವಾ ಟಿಪ್ಸ್ ನೀಡಿದರೆ ರೈಡ್ ಬೇಗ ಸಿಗುತ್ತದೆ ಎಂದು ಸಂದೇಶ ನೀಡುವುದು ಸಂಪೂರ್ಣ ನಿಷೇಧ. ಇಂತಹ ಆಯ್ಕೆಗಳನ್ನು ಆ್ಯಪ್‌ಗಳಿಂದ ತೆಗೆದುಹಾಕುವುದು ಕಡ್ಡಾಯವಾಗಿದೆ.
ಸರ್ಕಾರ ಮತ್ತೊಂದು ಮಹತ್ವದ ನಿಯಮವನ್ನೂ ಸ್ಪಷ್ಟಪಡಿಸಿದೆ. ಪ್ರಯಾಣಿಕರು ಚಾಲಕರ ಸೇವೆಯಿಂದ ಸಂತೃಪ್ತರಾದರೆ, ಟಿಪ್ಸ್ ನೀಡುವುದು ಸವಾರಿ ಮುಗಿದ ನಂತರ ಮಾತ್ರ ಸಾಧ್ಯ. ಅದು ಸಂಪೂರ್ಣವಾಗಿ ಗ್ರಾಹಕರ ಐಚ್ಛಿಕ ನಿರ್ಧಾರವಾಗಿರಬೇಕು; ಯಾವುದೇ ಒತ್ತಾಯ ಅಥವಾ ಸೂಚನೆ ಇರಬಾರದು.
ಇದಲ್ಲದೆ, ಪ್ರಯಾಣಿಕರು ನೀಡುವ ಟಿಪ್ಸ್‌ನಿಂದ ಓಲಾ, ಉಬರ್ ಅಥವಾ ಇತರ ಕಂಪನಿಗಳು ಯಾವುದೇ ಕಮಿಷನ್ ಕಡಿತ ಮಾಡಬಾರದು. ಟಿಪ್ಸ್‌ನ ಸಂಪೂರ್ಣ ಮೊತ್ತ ನೇರವಾಗಿ ಚಾಲಕರಿಗೆ ತಲುಪಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಈ ಕ್ರಮದಿಂದ ಪ್ರಯಾಣಿಕರಿಗೆ ನ್ಯಾಯಸಮ್ಮತ ಬುಕ್ಕಿಂಗ್ ಅನುಭವ ದೊರೆಯಲಿದ್ದು, ಟಿಪ್ಸ್ ನೀಡದ ಕಾರಣ ರೈಡ್ ನಿರಾಕರಣೆಯಾಗುವ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆಯಿದೆ. ಜೊತೆಗೆ ಚಾಲಕರಿಗೆ ದೊರೆಯುವ ಟಿಪ್ಸ್ ಕೂಡ ಸಂಪೂರ್ಣವಾಗಿ ಅವರ ಪಾಲಾಗುವಂತೆ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ.
ಹೊಸ ನಿಯಮಗಳು ಏನು?
-
ಬುಕಿಂಗ್‌ಗೂ ಮುನ್ನ Pre-Ride Tips ಕೇಳುವಂತಿಲ್ಲ
-
“ಟಿಪ್ ಕೊಟ್ಟರೆ ಬೇಗ ರೈಡ್” ಎಂಬ ಸಂದೇಶ ನಿಷೇಧ
-
ಟಿಪ್ಸ್ ನೀಡಲು ಅವಕಾಶ ಸವಾರಿ ಮುಗಿದ ನಂತರ ಮಾತ್ರ
-
ಟಿಪ್ಸ್ ನೀಡುವುದು ಸಂಪೂರ್ಣ ಗ್ರಾಹಕರ ಐಚ್ಛಿಕ
-
ಟಿಪ್ಸ್‌ನ 100% ಹಣ ಚಾಲಕರಿಗೇ, ಕಂಪನಿಗೆ ಕಮಿಷನ್ ಇಲ್ಲ





