ನವದೆಹಲಿ: ಓಲಾ (Ola), ಉಬರ್ (Uber), ರಾಪಿಡೋ (Rapido) ಸೇರಿದಂತೆ ಎಲ್ಲಾ ಪ್ರಮುಖ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ಮಹತ್ವದ ಮತ್ತು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಪ್ರಯಾಣ ಆರಂಭಿಸುವ ಮೊದಲು ಪ್ರಯಾಣಿಕರಿಂದ ಮುಂಗಡವಾಗಿ ಟಿಪ್ಸ್ (Tips) ಪಡೆಯುವ ಪ್ರಕ್ರಿಯೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಜೊತೆಗೆ, ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಬಲಪಡಿಸುವ ಉದ್ದೇಶದಿಂದ ಮಹಿಳಾ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮಹಿಳಾ ಚಾಲಕರನ್ನೇ ಆಯ್ಕೆ ಮಾಡಿಕೊಳ್ಳುವ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಡಿಸೆಂಬರ್ 15ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರ್ ವಾಹನ ಸಂಗ್ರಾಹಕ (Motor Vehicle Aggregator) ಮಾರ್ಗಸೂಚಿಗಳು 2025ಕ್ಕೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಗಳನ್ನು ಪ್ರಕಟಿಸಿದೆ. ಈ ತಿದ್ದುಪಡಿಗಳ ಮೂಲಕ ಪ್ರಯಾಣಿಕರ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಚಾಲಕರಿಗೂ ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗಿದೆ.
ಮುಂಗಡ ಟಿಪ್ಸ್‌ಗೆ ಸಂಪೂರ್ಣ ನಿಷೇಧ
ಇತ್ತೀಚಿನ ದಿನಗಳಲ್ಲಿ ಓಲಾ, ಉಬರ್ ಹಾಗೂ ಇತರ ಅಪ್ಲಿಕೇಶನ್‌ಗಳಲ್ಲಿ “10 ರೂ. ರಿಂದ 50 ರೂ. ಟಿಪ್ಸ್ ನೀಡಿದರೆ ಮಾತ್ರ ವಾಹನ ಲಭ್ಯ” ಎಂಬ ರೀತಿಯ ಒತ್ತಡ ಪ್ರಯಾಣಿಕರ ಮೇಲೆ ಬೀಳುತ್ತಿತ್ತು. ಟಿಪ್ಸ್ ನೀಡದೇ ಹೋದರೆ ಕಾರು ಅಥವಾ ಆಟೋ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿ, ರೈಡ್ ಬುಕ್ಕಿಂಗ್ ಸಮಯದಲ್ಲಿ ಅಥವಾ ಚಾಲಕನನ್ನು ಹುಡುಕುವ ಹಂತದಲ್ಲಿ ಟಿಪ್ಸ್ ಆಯ್ಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇನ್ನು ಮುಂದೆ ಟಿಪ್ಸ್ ನೀಡುವ ಆಯ್ಕೆಯು ಕೇವಲ ಪ್ರಯಾಣ ಪೂರ್ಣಗೊಂಡ ನಂತರವೇ ಅಪ್ಲಿಕೇಶನ್‌ನಲ್ಲಿ ಗೋಚರಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಟಿಪ್ಸ್ ನೀಡುವುದು ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಯಾವುದೇ ರೀತಿಯ ಬಲವಂತ ಇರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಚಾಲಕರಿಗೆ ಸಂಪೂರ್ಣ ಟಿಪ್ಸ್ ಮೊತ್ತ
ಪ್ರಯಾಣಿಕರು ನೀಡುವ ಟಿಪ್ಸ್‌ನ ಸಂಪೂರ್ಣ ಮೊತ್ತ ಚಾಲಕರಿಗೇ ತಲುಪಬೇಕು. ಯಾವುದೇ ರೈಡ್-ಹೇಲಿಂಗ್ ಕಂಪನಿಗಳು ಈ ಹಣದಿಂದ ಕಮಿಷನ್ ಅಥವಾ ಸೇವಾ ಶುಲ್ಕ ಕಡಿತಗೊಳಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಹೊಸ ಕ್ರಮ
ಹೊಸ ಮಾರ್ಗಸೂಚಿಗಳಲ್ಲಿನ ಷರತ್ತು 15.6ರ ಪ್ರಕಾರ, ಎಲ್ಲಾ ರೈಡ್-ಹೇಲಿಂಗ್ ಅಪ್ಲಿಕೇಶನ್‌ಗಳು ಮಹಿಳಾ ಪ್ರಯಾಣಿಕರಿಗೆ ಮಹಿಳಾ ಚಾಲಕರನ್ನು ಆಯ್ಕೆ ಮಾಡುವ ಆಯ್ಕೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಈ ಕ್ರಮವು ಮಹಿಳಾ ಪ್ರಯಾಣಿಕರಿಗೆ ಹೆಚ್ಚುವರಿ ಭದ್ರತೆ ನೀಡುವುದರ ಜೊತೆಗೆ, ಮಹಿಳಾ ಚಾಲಕರ ಸಂಖ್ಯೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
ನಗರಗಳಲ್ಲಿ ರಾತ್ರಿ ಸಮಯದ ಪ್ರಯಾಣ, ಒಂಟಿ ಪ್ರಯಾಣದ ಸಂದರ್ಭಗಳಲ್ಲಿ ಮಹಿಳೆಯರು ಎದುರಿಸುವ ಭದ್ರತಾ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಸರ್ಕಾರದ ನಿರ್ಧಾರಕ್ಕೆ ಕಾರಣವೇನು?
ಬೆಂಗಳೂರು ಮೂಲದ ‘ನಮ್ಮ ಯಾತ್ರಿ’ ಅಪ್ಲಿಕೇಶನ್‌ನಲ್ಲಿ ಮೊದಲಿಗೆ ಮುಂಗಡ ಟಿಪ್ಸ್ ನೀತಿ ಜಾರಿಗೆ ಬಂದಿದ್ದು, ನಂತರ ಅದನ್ನೇ ಓಲಾ ಮತ್ತು ಉಬರ್ ಸಹ ಅನುಸರಿಸಿದ್ದವು. ಆದರೆ “ಹೆಚ್ಚುವರಿ ಹಣ ನೀಡಿದರೆ ಮಾತ್ರ ವಾಹನ ಸಿಗುತ್ತದೆ” ಎಂಬ ಆರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಸರ್ಕಾರಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಪ್ರಯಾಣಿಕರ ಹಿತಾಸಕ್ತಿಗಾಗಿ ಈ ಕಠಿಣ ನಿರ್ಧಾರ ಕೈಗೊಂಡಿದೆ.





