ನವದೆಹಲಿ: ದೇಶದಲ್ಲಿ ಹಣದ ಆಮಿಷ ಒಡ್ಡುವ ಆನ್‌ಲೈನ್ ಗೇಮಿಂಗ್ ಜಾಲಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಬೃಹತ್ ಹೆಜ್ಜೆ ಇಟ್ಟಿದೆ. ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಅನ್ನು ಜಾರಿಗೆ ತರುವ ಮೂಲಕ, ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳನ್ನು (Online Real Money Games) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಅವರು ಲೋಕಸಭೆಯಲ್ಲಿ ಮಾಹಿತಿ ನೋಡಿದ್ದಾರೆ.
ಏನಿದು ಹೊಸ ಕಾಯ್ದೆ?
ಭಾರತದಲ್ಲಿ ಸುರಕ್ಷಿತ ಮತ್ತು ಜವಾಬ್ದಾರಿಯುತ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಕೌಶಲ್ಯದ ಆಟ (Skill Games) ಅಥವಾ ಅದೃಷ್ಟದ ಆಟ (Chance Games) ಯಾವುದಾದರೂ ಇರಲಿ, ಅದರಲ್ಲಿ ಹಣದ ವಹಿವಾಟು ಅಥವಾ ಬೆಟ್ಟಿಂಗ್ ಒಳಗೊಂಡಿದ್ದರೆ ಅಂತಹ ಆಟಗಳನ್ನು ಈ ಕಾಯ್ದೆ ಅಡಿಯಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, ಇಂತಹ ಆಟಗಳಿಗೆ ಹಣಕಾಸಿನ ವಹಿವಾಟು ನಡೆಸಲು ಬ್ಯಾಂಕ್ ಅಥವಾ ಪೇಮೆಂಟ್ ಗೇಟ್‌ವೇಗಳನ್ನು ಬಳಸುವುದನ್ನೂ ನಿರ್ಬಂಧಿಸಲಾಗಿದೆ.
ಜಾಹೀರಾತು ಮತ್ತು ಪ್ರಚಾರಕ್ಕೂ ಕಠಿಣ ಶಿಕ್ಷೆ
ಕೇವಲ ಆಟ ಆಡುವುದು ಮಾತ್ರವಲ್ಲ, ಇಂತಹ ಹಣದ ಆಟಗಳನ್ನು ಪ್ರಚಾರ ಮಾಡುವುದು ಕೂಡ ಈಗ ಅಪರಾಧ. ಸೋಶಿಯಲ್ ಮೀಡಿಯಾ ಅಥವಾ ಟಿವಿಗಳಲ್ಲಿ ನಿಷೇಧಿತ ಗೇಮಿಂಗ್ ಆ್ಯಪ್‌ಗಳ ಜಾಹೀರಾತು ನೀಡಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 50 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಅದೇ ತಪ್ಪು ಮಾಡಿದರೆ ಶಿಕ್ಷೆಯ ಅವಧಿ 3 ವರ್ಷಕ್ಕೆ ಮತ್ತು ದಂಡ 1 ಕೋಟಿ ರೂಪಾಯಿಗೆ ಏರಿಕೆಯಾಗಲಿದೆ.
ದಂಡ ಮತ್ತು ಜೈಲು ಶಿಕ್ಷೆಯ ವಿವರ:
-
ಮೊದಲ ಬಾರಿ ಅಪರಾಧ: ಹಣದ ಆಟಗಳನ್ನು ಒದಗಿಸುವವರಿಗೆ 3 ವರ್ಷಗಳವರೆಗೆ ಜೈಲು ಅಥವಾ 1 ಕೋಟಿ ರೂ. ದಂಡ.
-
ಎರಡನೇ ಬಾರಿ ಅಪರಾಧ: ಕನಿಷ್ಠ 3 ವರ್ಷದಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಕೋಟಿ ರೂ.ವರೆಗೆ ದಂಡ.
-
ಮಾಹಿತಿ ತಂತ್ರಜ್ಞಾನ ಕಾಯ್ದೆ: ಐಟಿ ಕಾಯ್ದೆ 2000ರ ಅಡಿಯಲ್ಲಿ ಇಂತಹ ಕಾನೂನುಬಾಹಿರ ವೆಬ್‌ಸೈಟ್ ಮತ್ತು ಆ್ಯಪ್‌ಗಳನ್ನು ಬ್ಲಾಕ್ ಮಾಡಲು ಸರ್ಕಾರಕ್ಕೆ ಈಗ ಹೆಚ್ಚಿನ ಅಧಿಕಾರ ನೀಡಲಾಗಿದೆ.
ಈ ಕಾಯ್ದೆಯ ಅಡಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ‘ಭಾರತೀಯ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ’ವನ್ನು ಸ್ಥಾಪಿಸಲಾಗುವುದು. ಇದು ಯಾವ ಆಟಗಳನ್ನು ಅನುಮತಿಸಬಹುದು ಮತ್ತು ಯಾವುದನ್ನು ನಿಷೇಧಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಇ-ಸ್ಪೋರ್ಟ್ಸ್ ಮತ್ತು ಹಣದ ವಹಿವಾಟು ಇಲ್ಲದ ಸಾಮಾಜಿಕ ಆಟಗಳಿಗೆ (Social Games) ಉತ್ತೇಜನ ನೀಡುವುದು ಇದರ ಗುರಿಯಾಗಿದೆ. ಬಳಕೆದಾರರ ಕುಂದುಕೊರತೆಗಳನ್ನು ಆಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಅಕ್ಟೋಬರ್ 2, 2025 ರಂದು ಈ ಕಾಯ್ದೆಯ ಕರಡು ನಿಯಮಗಳನ್ನು ಪ್ರಕಟಿಸಿದೆ. ಸಾರ್ವಜನಿಕರು ಮತ್ತು ಸಂಬಂಧಿತ ಸಂಸ್ಥೆಗಳು ತಮ್ಮ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಭಾರತವನ್ನು ಗೇಮಿಂಗ್ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವುದರ ಜೊತೆಗೆ, ಯುವಜನತೆಯನ್ನು ಆನ್‌ಲೈನ್ ಹಣದ ಹಾವಳಿಯಿಂದ ರಕ್ಷಿಸುವುದು ಸರ್ಕಾರದ ಈ ದಿಟ್ಟ ನಿರ್ಧಾರದ ಆಶಯವಾಗಿದೆ.





