ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ. ನೂತನ ಅಧ್ಯಕ್ಷ ನಿತಿನ್ ನಬಿನ್ ನನ್ನ ಬಾಸ್” ಎಂದು ಹೇಳಿದ್ದಾರೆ..
ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಧಿಕೃತವಾಗಿ ಅಧಿಕಾರವನ್ನು ನಿತಿನ್ ನಬಿನ್ ಅವರಿಗೆ ಹಸ್ತಾಂತರಿಸಿದರು. ಕೇವಲ 45ನೇ ವಯಸ್ಸಿನಲ್ಲಿ ನಿತಿನ್ ನಬಿನ್ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕವಾಗುವ ಮೂಲಕ, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಕ್ಕೆ ಅತೀ ಕಿರಿಯ ಅಧ್ಯಕ್ಷ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಾನು ಯಾವತ್ತೂ ಪ್ರಧಾನಿ ಸ್ಥಾನವನ್ನು ಹುದ್ದೆಯಾಗಿ ನೋಡಿಲ್ಲ. ನಾನು ಇನ್ನೂ ಪಕ್ಷದ ಸಾಮಾನ್ಯ ಕಾರ್ಯಕರ್ತನೇ. ಪಕ್ಷದ ಅಧ್ಯಕ್ಷರು ನನ್ನ ಬಾಸ್” ಎಂದು ಹೇಳಿದ್ದಾರೆ. ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಪಕ್ಷಕ್ಕೆ ಹೊಸ ಶಕ್ತಿ ಸಿಕ್ಕಿದೆ. ಯುವ ನಾಯಕತ್ವ ಬಿಜೆಪಿ ಕಾರ್ಯಕರ್ತರಿಗೆ ‘ಡಬಲ್ ಸ್ಪೀಡ್’ ನೀಡುತ್ತದೆ ಎಂದು ಮೋದಿ ಹೇಳಿದರು.
ನಿತಿನ್ ನಬಿನ್ ಅವರನ್ನು “ಈ ಜನರೇಶನ್ ನಾಯಕ” ಎಂದು ಬಣ್ಣಿಸಿದ ಪ್ರಧಾನಿ ಮೋದಿ, “ನಮ್ಮ ಕಾಲದಲ್ಲಿ ರೇಡಿಯೋ ಮೂಲಕ ಮಾಹಿತಿ ಪಡೆಯುತ್ತಿದ್ದೆವು ಎಂದರು. ಇಂದಿನ ಯುವ ನಾಯಕತ್ವ ಎಐ, ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿ ಕೆಲಸ ಮಾಡುತ್ತಿದೆ. ನಿತಿನ್ ನಬಿನ್ ನೇತೃತ್ವದಲ್ಲಿ ಬಿಜೆಪಿ ಹೊಸ ಅಧ್ಯಾಯ ಬರೆಯಲಿದೆ” ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಬೆಳವಣಿಗೆಯ ಹಾದಿಯನ್ನು ಸ್ಮರಿಸಿದ ಪ್ರಧಾನಿ ಮೋದಿ, “ಹಲವು ಹೋರಾಟಗಳು, ತ್ಯಾಗಗಳು ಮತ್ತು ಸಂಘರ್ಷಗಳಿಂದ ಬಿಜೆಪಿ ಹುಟ್ಟಿಕೊಂಡಿದೆ. ನಿರಂತರ ಪರಿಶ್ರಮದ ಫಲವಾಗಿ ಇಂದು ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿದೆ” ಎಂದು ಹೇಳಿದರು. ಅತೀ ಹೆಚ್ಚು ಕಾರ್ಯಕರ್ತರು, ಅತೀ ಹೆಚ್ಚು ರಾಜ್ಯಗಳಲ್ಲಿ ಆಡಳಿತ, ಅತೀ ಹೆಚ್ಚು ಚುನಾವಣೆ ಗೆಲುವುಗಳು ಈ ಎಲ್ಲ ದಾಖಲೆಗಳು ಬಿಜೆಪಿಯ ಸಂಘಟನಾ ಬಲವನ್ನು ತೋರಿಸುತ್ತವೆ ಎಂದು ಮೋದಿ ಅಭಿಪ್ರಾಯಪಟ್ಟರು.
ಬಿಜೆಪಿಯ ಮೂಲ ತತ್ವಗಳ ಕುರಿತು ಮಾತನಾಡಿದ ಅವರು, “ಇಲ್ಲಿ ಪ್ರತಿ ಕಾರ್ಯಕರ್ತರ ಅಭಿಪ್ರಾಯಕ್ಕೂ ಗೌರವ ಇದೆ. ಪ್ರಜಾಪ್ರಭುತ್ವ ಮತ್ತು ಒಳಪಕ್ಷೀಯ ಚರ್ಚೆಯೇ ಬಿಜೆಪಿಯ ಶಕ್ತಿ” ಎಂದು ಹೇಳಿದರು.
ನಿತಿನ್ ನಬಿನ್ ಅವರ ಕಾರ್ಯಾನುಭವವನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, ಅವರು ಹಲವು ರಾಜ್ಯಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು. ಸಂಘಟನೆ, ಆಡಳಿತ ಹಾಗೂ ತಂತ್ರಜ್ಞಾನ ಬಳಕೆಯಲ್ಲಿ ನಿತಿನ್ ನಬಿನ್ ಅವರ ಸಾಮರ್ಥ್ಯ ಸ್ಪಷ್ಟವಾಗಿದೆ. ಇದೇ ಉತ್ಸಾಹ ಮತ್ತು ಕಾರ್ಯಕ್ಷಮತೆಯೊಂದಿಗೆ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.





