ಹೊಸ ವರ್ಷದ ಸಂಭ್ರಮಕ್ಕೆ ಸಜ್ಜಾಗುತ್ತಿರುವ ವೇಳೆಯಲ್ಲೇ ಅಮೆರಿಕದಿಂದ ಬಂದಿರುವ ವರದಿಯೊಂದು ಭಾರತ–ಪಾಕಿಸ್ತಾನ ನಡುವಿನ ಸಂಬಂಧಗಳ ಕುರಿತು ಗಂಭೀರ ಆತಂಕ ಹುಟ್ಟಿಸಿದೆ. ಅಮೆರಿಕದ ಪ್ರತಿಷ್ಠಿತ ವಿದೇಶಾಂಗ ಚಿಂತನ ಸಂಸ್ಥೆಯಾದ ಕೌನ್ಸಿಲ್ ಆನ್ ಫಾರಿನ್ ರಿಲೇಷನ್ಸ್ (CFR) ಬಿಡುಗಡೆ ಮಾಡಿರುವ ವಿಶ್ಲೇಷಣಾ ವರದಿ ಪ್ರಕಾರ, 2026ರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವಿನ ಶಸ್ತ್ರಾಸ್ತ್ರ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಈ ವರದಿ ಹೊಸ ವರ್ಷಕ್ಕೆ ಕಾಲಿಡುವ ಮುನ್ನವೇ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2025ರಲ್ಲಿ ನಡೆದ ಘಟನೆಗಳೇ 2026ರಲ್ಲಿ ಮತ್ತೆ ಮರುಕಳಿಸುವ ಭೀತಿಯನ್ನು CFR ವ್ಯಕ್ತಪಡಿಸಿದೆ. ಪಹಲ್ಗಾಂನಲ್ಲಿ ನಡೆದ ಭೀಕರ ಉಗ್ರ ದಾಳಿಯ ನಂತರ ಭಾರತ ಕೈಗೊಂಡಿದ್ದ ‘ಆಪರೇಷನ್ ಸಿಂದೂರ’ ಮಾದರಿಯೇ ಮುಂದಿನ ವರ್ಷದಲ್ಲೂ ಪುನರಾವರ್ತನೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
CFRನ ವಿದೇಶಾಂಗ ವ್ಯವಹಾರಗಳ ಚಿಂತಕರ ಪ್ರಕಾರ, ಭಾರತ–ಪಾಕ್ ನಡುವಿನ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿರುವುದು ಭಯೋತ್ಪಾದನೆ. ಕಾಶ್ಮೀರ ಸೇರಿದಂತೆ ಗಡಿಭಾಗಗಳಲ್ಲಿ ಉಗ್ರ ಸಂಘಟನೆಗಳ ಚಟುವಟಿಕೆಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಉಗ್ರ ದಾಳಿಗಳು ಹೆಚ್ಚಾದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಕಠಿಣ ಸೇನಾ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.
2025ರಲ್ಲಿ ನಡೆದ ಪಹಲ್ಗಾಂ ಉಗ್ರ ದಾಳಿ ನಂತರ ಭಾರತ ಕೈಗೊಂಡಿದ್ದ ಆಪರೇಷನ್ ಸಿಂದೂರ, ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿತ್ತು. ಆದರೆ ಆ ಬಳಿಕವೂ ಉಗ್ರ ಚಟುವಟಿಕೆಗಳಲ್ಲಿ ಕಡಿಮೆ ಆಗಿಲ್ಲ ಎಂಬುದು CFRನ ವಿಶ್ಲೇಷಣೆ. ಇದರಿಂದಾಗಿ ಎರಡೂ ದೇಶಗಳ ನಡುವೆ ಮತ್ತೆ ಗಡಿ ಸಂಘರ್ಷ, ವಾಯು ದಾಳಿ ಅಥವಾ ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ವರದಿಯ ಪ್ರಕಾರ, ಭಾರತ ತನ್ನ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ತಾರತಮ್ಯ ತೋರಿಸುವುದಿಲ್ಲ. ಉಗ್ರ ದಾಳಿಗಳಿಗೆ ಪ್ರತಿಯಾಗಿ ತಕ್ಷಣದ ಹಾಗೂ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಭಾರತದ ನೀತಿಯಾಗಿದೆ. ಇದು ಪಾಕಿಸ್ತಾನದೊಂದಿಗೆ ನೇರ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು. ಪಾಕಿಸ್ತಾನದಲ್ಲಿನ ಸೇನೆ ಮತ್ತು ಉಗ್ರ ಸಂಘಟನೆಗಳ ನಡುವಿನ ಸಂಬಂಧವೂ ಈ ಸಂಘರ್ಷದ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು CFR ಅಭಿಪ್ರಾಯಪಟ್ಟಿದೆ.
ಅಲ್ಲದೆ, ಕಾಶ್ಮೀರ ಪ್ರದೇಶದಲ್ಲಿ ಸಣ್ಣ ಮಟ್ಟದ ಉಗ್ರ ದಾಳಿಗಳೇ ದೊಡ್ಡ ಮಟ್ಟದ ಶಸ್ತ್ರಾಸ್ತ್ರ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವರದಿ ಎಚ್ಚರಿಸಿದೆ.





