ಮುಜಾಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ರಾಜಧಾನಿ ಮುಜಾಫರಾಬಾದ್‌ನಲ್ಲಿ ಸೋಮವಾರ (ಸೆಪ್ಟೆಂಬರ್ 29) ಪ್ರತಿಭಟನೆ ಭುಗಿಲೆದ್ದಿದೆ. ಅವಾಮಿ ಆಕ್ಷನ್ ಕಮಿಟಿ (ಎಎಸಿ) ನೇತೃತ್ವದಲ್ಲಿ ಆರಂಭವಾದ ‘ಶಟರ್-ಡೌನ್ ಮತ್ತು ವೀಲ್-ಜಾಮ್’ (ಅಂಗಡಿ ಮುಂಗಟ್ಟು ಬಂದ್ ಮತ್ತು ವಾಹನ ಸ್ಥಗಿತ) ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಇಡೀ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆಯನ್ನು ನಿಯಂತ್ರಿಸಲು ಪಾಕಿಸ್ತಾನ ಸರ್ಕಾರ ಸೇನಾ ಬಲ ಪ್ರಯೋಗ ಮಾಡಿದೆ. ಹಲವೆಡೆ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿದ್ದು, ಈವರೆಗೆ ಇಬ್ಬರು ಮೃತಪಟ್ಟು, 22 ಜನರು ಗಾಯಗೊಂಡಿದ್ದಾರೆ.
ಪ್ರತಿಭಟನೆಗೆ ಕಾರಣ ಏನು..?
ಈ ಪ್ರತಿಭಟನೆಗೆ ಕಾರಣ ದಶಕಗಳಿಂದ ಸಾಗಿಬಂದ ಆರ್ಥಿಕ ನಿರ್ಲಕ್ಷ್ಯ ಮತ್ತು ರಾಜಕೀಯ ಕಡೆಗಣನೆ ಎಂದು ಎಎಸಿ ತಿಳಿಸಿದೆ. ಸರ್ಕಾರದ ದಮನಕಾರಿ ನೀತಿ ಮತ್ತು ವಿಫಲ ಮಾತುಕತೆಗಳ ವಿರುದ್ಧ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಎಎಸಿ ಸಮಿತಿಯು 38 ಅಂಶಗಳ ಬೇಡಿಕೆ ಪಟ್ಟಿಯನ್ನು ಸರ್ಕಾರದ ಮುಂದಿಟ್ಟಿದೆ. ಈ ಬೇಡಿಕೆಗಳ ಪೈಕಿ ನಾಗರಿಕರ ಮೂಲಭೂತ ಹಕ್ಕುಗಳು, ಆರ್ಥಿಕ ಸಮಸ್ಯೆಗಳ ಪರಿಹಾರ ಮತ್ತು ರಾಜಕೀಯ ಸಮತೋಲನದ ಕುರಿತಾದ ಅಂಶಗಳು ಸೇರಿವೆ.
ಸರ್ಕಾರದ ಕಠಿಣ ಕ್ರಮ
ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಇಸ್ಲಾಮಾಬಾದ್ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.
-
ಭದ್ರತಾ ಪಡೆಗಳ ಭಾರೀ ತಯಾರಿ: ಪ್ರಮುಖ ಪಟ್ಟಣಗಳಲ್ಲಿ ಶಸ್ತ್ರಸಜ್ಜಿತ ಪಡೆಗಳು ಧ್ವಜ ಮೆರವಣಿಗೆ ನಡೆಸಿದ್ದು, ಪಂಜಾಬ್‌ನಿಂದ ಸಾವಿರಾರು ಸೈನಿಕರನ್ನು ಕರೆಸಿಕೊಳ್ಳಲಾಗಿದೆ. ಸ್ಥಳೀಯ ಭದ್ರತಾ ಪಡೆಗಳಿಗೆ ಬೆಂಬಲವಾಗಿ ಇಸ್ಲಾಮಾಬಾದ್‌ನಿಂದ ಹೆಚ್ಚುವರಿಯಾಗಿ 1,000 ಪೊಲೀಸರನ್ನು ಕಳುಹಿಸಲಾಗಿದೆ.
-
ಇಂಟರ್ನೆಟ್ ಸ್ಥಗಿತ: ಮಧ್ಯರಾತ್ರಿಯಿಂದಲೇ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಮಾಚಾರದ ಹರಿವನ್ನು ತಡೆಯುವ ಮತ್ತು ಪ್ರತಿಭಟನಾಕಾರರ ಸಂಘಟನೆಯನ್ನು ಕುಂಠಿತಗೊಳಿಸುವ ಉದ್ದೇಶದಿಂದ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ.
-
ನಗರ ಪ್ರವೇಶದಲ್ಲಿ ನಿರ್ಬಂಧ: ಶನಿವಾರ ಮತ್ತು ಭಾನುವಾರ ಪ್ರಮುಖ ನಗರಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪೊಲೀಸರು ಮುಚ್ಚಿದ್ದಾರೆ.
ಸಂಧಾನ ವಿಫಲ
ಈ ನಡುವೆ, ಎಎಸಿ ಸಮಾಲೋಚಕರು, ಪಿಒಕೆ ಆಡಳಿತ ಮತ್ತು ಫೆಡರಲ್ ಮಂತ್ರಿಗಳ ನಡುವಿನ ಸುದೀರ್ಘ ಮಾತುಕತೆ ವಿಫಲವಾಗಿದೆ. ಸುಮಾರು 13 ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ, ನಿರಾಶ್ರಿತರ ವಿಧಾನಸಭಾ ಸ್ಥಾನಗಳನ್ನು ತೆಗೆದುಹಾಕುವ ವಿಚಾರದಲ್ಲಿ ಸಮಿತಿಯು ರಾಜಿ ಮಾಡಿಕೊಳ್ಳಲು ನಿರಾಕರಿಸಿದಾಗ ಸಂಧಾನ ಮುರಿದುಬಿದ್ದಿದೆ. “ಮಾತುಕತೆ ಅಪೂರ್ಣ ಮತ್ತು ಅನಿರ್ದಿಷ್ಟವಾಗಿದೆ” ಎಂದು ಘೋಷಿಸಿದ ಎಎಸಿ ನೇತಾರರು, ಮುಷ್ಕರವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆ
ಭಾನುವಾರದಂದು ಮುಜಫರಾಬಾದ್‌ನ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ತೆರೆದು, ಮುಷ್ಕರಕ್ಕೆ ಮುನ್ನ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟರು. ಭದ್ರತಾ ಪಡೆಗಳ ವಾಹನಗಳು ನಗರಕ್ಕೆ ಲಗ್ಗೆ ಇಡುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸರ್ಕಾರದ ಕಠಿಣ ಕ್ರಮದ ಬಗ್ಗೆ ಜನರಲ್ಲಿ ಆತಂಕ ಮನೆಮಾಡಿದೆ. ಪಾಕಿಸ್ತಾನದ ಬಲವಂತದ ಆಕ್ರಮಣದಿಂದ ಸ್ವಾತಂತ್ರ್ಯ ಬೇಕೆಂದು ಜನರು ಘೋಷಣೆ ಕೂಗುತ್ತಿರುವುದು ಕಂಡುಬಂದಿದೆ.
ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಪ್ರತಿಭಟನೆಯು ಶಾಂತಿಯುತವಾಗಿರುತ್ತದೆ ಆದರೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಎಎಸಿ ನಾಯಕರು ಸ್ಪಷ್ಟಪಡಿಸಿದ್ದಾರೆ. ಇಂಟರ್ನೆಟ್ ಸ್ಥಗಿತ ಮತ್ತು ಬಿಗಿ ಭದ್ರತೆಯ ನಡುವೆ, ಸೋಮವಾರದ ಈ ಮುಖಾಮುಖಿ ಪಿಒಕೆಯ ರಾಜಕೀಯ ಹಕ್ಕುಗಳ ಹೋರಾಟದಲ್ಲಿ ಒಂದು ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ. ಎರಡೂ ಕಡೆಯವರು ಹಿಂದೆ ಸರಿಯಲು ಸಿದ್ಧರಿಲ್ಲದ ಕಾರಣ, ಈ ಸಂಘರ್ಷವು ಪಾಕ್ ಆಕ್ರಮಿತ ಕಾಶ್ಮೀರದ ಕಣಿವೆಗಳನ್ನು ಮೀರಿ ವ್ಯಾಪಿಸುವ ಲಕ್ಷಣಗಳು ಗೋಚರಿಸುತ್ತಿವೆ.





