ಭೋಪಾಲ್: ಹಲವು ದಶಕಗಳಿಂದ ವಿವಾದದ ಕೇಂದ್ರವಾಗಿದ್ದ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜಶಾಲಾ-ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. ಇಂದೋರ್ ಪೀಠವು ಭೋಜಶಾಲಾ ಆವರಣವನ್ನು ದೇವಸ್ಥಾನ ಎಂದು ಘೋಷಿಸಿ, ಹಿಂದೂಗಳಿಗೆ ಇಲ್ಲಿ ಪೂಜೆ ಸಲ್ಲಿಸುವ ಸಂಪೂರ್ಣ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ತಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ಪ್ರಕಟಿಸಿದೆ. ಮೇ 12ರಂದು ವಿಚಾರಣೆ ಪೂರ್ಣಗೊಂಡ ಬಳಿಕ ಕಾಯ್ದಿರಿಸಲಾಗಿದ್ದ ತೀರ್ಪನ್ನು ಇಂದು ಪ್ರಕಟಿಸಲಾಯಿತು..
ಈ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿ ಪ್ರಮುಖ ಆಧಾರವಾಗಿತ್ತು. ಸಮೀಕ್ಷೆಯಲ್ಲಿ ಪತ್ತೆಯಾದ ಸಾಕ್ಷ್ಯಾಧಾರಗಳು ಈ ಸ್ಥಳವು ಮೂಲತಃ ಹಿಂದೂ ದೇವಸ್ಥಾನವಾಗಿತ್ತು ಎಂಬುದನ್ನು ದೃಢಪಡಿಸುತ್ತವೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ಭೋಜಶಾಲಾ ಸಂಕೀರ್ಣವು ರಾಜ ಭೋಜ ನಿರ್ಮಿಸಿದ್ದ ವಾಗ್ದೇವಿ ಅಥವಾ ಸರಸ್ವತಿ ದೇವಾಲಯ ಮತ್ತು ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ಉಲ್ಲೇಖಿಸಿದೆ. ಪರಮಾರ ರಾಜವಂಶದ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಕೇಂದ್ರವು ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಮುಖ ತಾಣವಾಗಿತ್ತು ಎಂದು ತಿಳಿಸಿದೆ.
ಎಎಸ್‌ಐ ಸಮೀಕ್ಷೆಯಲ್ಲಿ ಪತ್ತೆಯಾದ ಸಂಸ್ಕೃತ ಮತ್ತು ಪ್ರಾಕೃತ ಭಾಷೆಯ ಶಾಸನಗಳು, ಪುರಾತನ ಕೆತ್ತನೆಗಳು ಹಾಗೂ ಬ್ರಹ್ಮ, ಗಣೇಶ ಸೇರಿದಂತೆ 94ಕ್ಕೂ ಹೆಚ್ಚು ಹಿಂದೂ ದೇವತೆಗಳ ವಿಗ್ರಹಗಳ ಅವಶೇಷಗಳು ದೇವಸ್ಥಾನದ ಅಸ್ತಿತ್ವವನ್ನು ಬಲಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ಪ್ರಸ್ತುತ ಇರುವ ಕಮಲ್ ಮೌಲಾ ಮಸೀದಿ ರಚನೆಯನ್ನು ಹಿಂದಿನ ದೇವಸ್ಥಾನದ ಸ್ತಂಭಗಳು, ಕಲ್ಲುಗಳು ಮತ್ತು ಅವಶೇಷಗಳನ್ನು ಬಳಸಿ ನಿರ್ಮಿಸಲಾಗಿದೆ ಎಂಬುದೂ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಕಮಲ್ ಮೌಲಾ ಮಸೀದಿ ಸಮಿತಿ ಪರ ವಕೀಲರು ಎಎಸ್‌ಐ ಸಮೀಕ್ಷೆ ಏಕಪಕ್ಷೀಯವಾಗಿದೆ ಹಾಗೂ ಮುಸ್ಲಿಂ ಅರ್ಜಿದಾರರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್ ತಿರಸ್ಕರಿಸಿ, ವೈಜ್ಞಾನಿಕ ಸಮೀಕ್ಷೆಯು ಸಮರ್ಪಕ ರೀತಿಯಲ್ಲಿ ನಡೆದಿದ್ದು, ಅದರ ವರದಿಯಲ್ಲಿ ಸ್ಪಷ್ಟ ಸಾಕ್ಷ್ಯಗಳಿವೆ ಎಂದು ತಿಳಿಸಿದೆ.
ಧಾರ್ಮಿಕ ಸ್ಥಳಗಳ ಸಂರಕ್ಷಣೆ ಮತ್ತು ಭಕ್ತರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ ಎಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ಹಿನ್ನೆಲೆ ಭೋಜಶಾಲಾ ಪ್ರದೇಶದ ಸಂರಕ್ಷಣೆ ಮತ್ತು ಭಕ್ತರ ಸುರಕ್ಷತೆ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಭೋಜಶಾಲಾ ವಿವಾದ ಕಳೆದ ಎರಡು ದಶಕಗಳಿಂದ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಕಳೆದ 21 ವರ್ಷಗಳಿಂದ ಪ್ರತಿ ಮಂಗಳವಾರ ಹಿಂದೂಗಳು ಇಲ್ಲಿ ಪೂಜೆ ಸಲ್ಲಿಸುತ್ತಿದ್ದರೆ, ಶುಕ್ರವಾರದಂದು ಮುಸ್ಲಿಮರು ನಮಾಜ್ ಆಚರಿಸುತ್ತಿದ್ದರು. ಈ ವ್ಯವಸ್ಥೆಯ ನಡುವೆಯೇ ಸ್ಥಳದ ಮೂಲ ಸ್ವರೂಪ ಕುರಿತು ವಿವಾದ ಮುಂದುವರಿದಿತ್ತು.
ಈ ಸಂಬಂಧ ‘ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ ಸಂಘಟನೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ವೈಜ್ಞಾನಿಕ ಸಮೀಕ್ಷೆಗೆ ಮನವಿ ಮಾಡಿತ್ತು. ಅದರಂತೆ ನ್ಯಾಯಾಲಯ ಎಎಸ್‌ಐಗೆ ಸಮೀಕ್ಷೆ ನಡೆಸಲು ಆದೇಶಿಸಿತ್ತು. ಸಮೀಕ್ಷಾ ವರದಿ ಸಲ್ಲಿಕೆಯಾದ ನಂತರ ಪ್ರಕರಣದ ಅಂತಿಮ ವಿಚಾರಣೆ ನಡೆದು, ಇದೀಗ ತೀರ್ಪು ಪ್ರಕಟವಾಗಿದೆ.





