ಮಹಾರಾಷ್ಟ್ರ ರಾಜಕೀಯದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ನಡುವೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷವು ತನ್ನ ಸಂಸದರನ್ನು ಪಕ್ಷಾಂತರದಿಂದ ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ.
ಲೋಕಸಭೆಯಲ್ಲಿ ತಮ್ಮ ಪಕ್ಷದ ಸ್ಥಾನಮಾನವನ್ನು ರಕ್ಷಿಸಿಕೊಳ್ಳಲು ಶಿವಸೇನೆ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಧಿಕೃತ ಪತ್ರ ಸಲ್ಲಿಸಿದೆ. ಪಕ್ಷದ ಹಿರಿಯ ಸಂಸದ ಹಾಗೂ ಸಂಸದೀಯ ನಾಯಕ ಅರವಿಂದ್ ಸಾವಂತ್ ಅವರು ಸಲ್ಲಿಸಿದ ಈ ಪತ್ರದಲ್ಲಿ, ಶಿವಸೇನೆ ಹೊರತುಪಡಿಸಿ ಯಾವುದೇ ಬಂಡಾಯ ಗುಂಪಿಗೆ ಲೋಕಸಭೆಯಲ್ಲಿ ಪ್ರತ್ಯೇಕ ಗುರುತು ಅಥವಾ ಸೌಲಭ್ಯ ನೀಡಬಾರದು ಎಂದು ಮನವಿ ಮಾಡಲಾಗಿದೆ.
ಬಂಡಾಯ ಸಂಸದರು ಪ್ರತ್ಯೇಕ ಬಣ ರಚನೆ ಅಥವಾ ಸ್ಥಾನಮಾನಕ್ಕಾಗಿ ಸ್ಪೀಕರ್ ಅವರನ್ನು ಸಂಪರ್ಕಿಸಿದರೆ, ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಮೂಲ ಪಕ್ಷವಾದ ಶಿವಸೇನೆಗೆ ತನ್ನ ಅಭಿಪ್ರಾಯ ಮಂಡಿಸಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಪಕ್ಷಾಂತರ ವಿರೋಧಿ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವ ಹಕ್ಕನ್ನು ಪಕ್ಷ ಕಾಯ್ದಿರಿಸಿಕೊಂಡಿದೆ ಎಂದು ತಿಳಿಸಲಾಗಿದೆ.
ಈ ನಡುವೆ, ಉದ್ಧವ್ ಠಾಕ್ರೆ ಬಣದ ಸುಮಾರು 7ಲೋಕಸಭಾ ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಂಪರ್ಕದಲ್ಲಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ. ಕೆಲವು ಸಂಸದರು ದೆಹಲಿಯಲ್ಲಿ ಶಿಂಧೆ ಬಣದ ನಾಯಕರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಈ ಬೆಳವಣಿಗೆಗಳು ಜೂನ್ 19ರಂದು ನಡೆಯಲಿರುವ ಶಿವಸೇನೆ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿವೆ. ಬಂಡಾಯ ಸಂಸದರು ಮೊದಲು ಲೋಕಸಭೆಯಲ್ಲಿ ಪ್ರತ್ಯೇಕ ಬಣ ರಚಿಸಿಕೊಂಡು ಬಳಿಕ ಶಿಂಧೆ ಬಣದೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಇದರ ನಡುವೆ, ಆಡಳಿತಾರೂಢ ಮೈತ್ರಿಕೂಟದ ಈ ಪ್ರಯತ್ನಕ್ಕೆ ‘ಆಪರೇಷನ್ ಟೈಗರ್’ ಎಂಬ ಹೆಸರನ್ನು ನೀಡಲಾಗಿದೆ ಎನ್ನಲಾಗಿದ್ದು, ಇದು ಮಹಾರಾಷ್ಟ್ರ ರಾಜಕೀಯದ ಸಮೀಕರಣಗಳನ್ನು ಬದಲಾಯಿಸಬಹುದಾದ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಶಾಸಕರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಜೂನ್ 22ರಂದು ಮುಂಬೈನ ಪಕ್ಷದ ಕಚೇರಿ ‘ಶಿವಾಲಯ’ದಲ್ಲಿ ಎಲ್ಲಾ ಶಾಸಕರ ತುರ್ತು ಸಭೆ ಕರೆದಿದ್ದಾರೆ. ಪಕ್ಷದ ಏಕತೆಯನ್ನು ಉಳಿಸಿಕೊಳ್ಳುವುದು ಮತ್ತು ಮುಂದಿನ ರಾಜಕೀಯ ತಂತ್ರ ರೂಪಿಸುವುದು ಸಭೆಯ ಪ್ರಮುಖ ಉದ್ದೇಶವಾಗಿದೆ





