ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳಾಗಿವೆ ಎಂಬ ಸುದ್ದಿಗಳು ಭಾರಿ ಸಂಚಲನ ಮೂಡಿಸಿದ್ದವು. ಎಲ್‌ಪಿಜಿ ಕೊರತೆಯ ಹಿನ್ನೆಲೆಯಲ್ಲಿ ಅನಿಲ ಕಂಪನಿಗಳು ಬುಕಿಂಗ್ ಅಂತರವನ್ನು ಹೆಚ್ಚಿಸಿವೆ ಎಂಬ ವರದಿಗಳು ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದ್ದವು. ಆದರೆ, ಈ ಎಲ್ಲಾ ವರದಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಬುಕಿಂಗ್ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್‌ಗಳ ಬುಕಿಂಗ್ ಅಂತರವನ್ನು 25 ದಿನಗಳಿಂದ 35 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗಿತ್ತು. ಅಂದರೆ, ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕಿಂಗ್ ಮಾಡಲು ಕನಿಷ್ಠ 35 ದಿನ ಕಾಯಬೇಕು ಎಂಬ ನಿಯಮ ಜಾರಿಗೆ ಬಂದಿದೆ ಎಂದು ಬಿಂಬಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ವ್ಯಾಪ್ತಿಯ ಡಬಲ್ ಸಿಲಿಂಡರ್ ಸಂಪರ್ಕ ಹೊಂದಿರುವವರಿಗೆ ಈ ನಿಯಮ ಅನ್ವಯಿಸುತ್ತದೆ ಎಂಬ ಸುದ್ದಿ ಹಬ್ಬಿತ್ತು.
ಇದಲ್ಲದೆ, ಉಜ್ವಲ ಯೋಜನೆಯ ಫಲಾನುಭವಿಗಳು ಮುಂದಿನ ಬುಕಿಂಗ್‌ಗಾಗಿ 45 ದಿನ ಕಾಯಬೇಕು ಮತ್ತು ನಗರ ಪ್ರದೇಶದ ಸಿಂಗಲ್ ಸಿಲಿಂಡರ್ ಗ್ರಾಹಕರು 25 ದಿನಗಳ ನಂತರವೇ ಬುಕ್ ಮಾಡಲು ಸಾಧ್ಯ ಎಂಬ ಮಾಹಿತಿಯೂ ಹರಡಿತ್ತು. ಪೂರೈಕೆಯನ್ನು ಸಮತೋಲನಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವದಂತಿಗಳಲ್ಲಿ ಉಲ್ಲೇಖಿಸಲಾಗಿತ್ತು.
ಸರ್ಕಾರದ ಸ್ಪಷ್ಟನೆ
ಈ ವಿಚಾರವಾಗಿ ಪತ್ರಿಕಾ ಮಾಹಿತಿ ಬ್ಯೂರೋ (PIB) ಫ್ಯಾಕ್ಟ್ ಚೆಕ್ ನಡೆಸಿದ್ದು, ಅಂತಹ ಯಾವುದೇ ಹೊಸ ನಿಯಮಗಳನ್ನು ಜಾರಿಗೆ ತಂದಿಲ್ಲ ಎಂದು ಖಚಿತಪಡಿಸಿದೆ. ಅಸ್ತಿತ್ವದಲ್ಲಿರುವ ಮರುಪೂರಣ (Refill) ಬುಕಿಂಗ್ ಸಮಯದ ಮಿತಿಗಳು ಮೊದಲಿನಂತೆಯೇ ಮುಂದುವರಿಯಲಿವೆ.
-
ನಗರ ಪ್ರದೇಶಗಳಲ್ಲಿ: ಹಿಂದಿನಂತೆ 25 ದಿನಗಳ ಅಂತರದಲ್ಲಿ ಸಿಲಿಂಡರ್ ಬುಕ್ ಮಾಡಬಹುದು.
-
ಗ್ರಾಮೀಣ ಪ್ರದೇಶಗಳಲ್ಲಿ: 45 ದಿನಗಳ ಅಂತರದ ಹಳೆಯ ನಿಯಮವೇ ಮುಂದುವರಿಯಲಿದೆ.
ದೇಶದಲ್ಲಿ ಎಲ್‌ಪಿಜಿ ದಾಸ್ತಾನು (Stock) ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಗ್ರಾಹಕರು ಯಾವುದೇ ಅನಧಿಕೃತ ವದಂತಿಗಳನ್ನು ಅಥವಾ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.





